ಉದ್ಯಾವರ: ಅಸಾಂಕ್ರಾಮಿಕ ರೋಗಗಳ ತಪಾಸಣಾ ಶಿಬಿರ
ವಿಶ್ವ ಅಪಸ್ಮಾರ ದಿನಾಚರಣೆ- 2025

ಉಡುಪಿ, ಫೆ.17: ವಿಶ್ವ ಅಪಸ್ಮಾರ ದಿನ-2025ರ ಅಂಗವಾಗಿ ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗ ಹಾಗೂ ನರ ವಿಜ್ಞಾನ ವಿಭಾಗಗಳು ಮೂಡುಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಲಯನ್ಸ್ ಕ್ಲಬ್ ಉದ್ಯಾವರ ಇವುಗಳ ಜಂಟಿ ಆಶ್ರಯದಲ್ಲಿ ಜನಜಾಗೃತಿ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದವು.
ಉದ್ಯಾವರದ ಲಯನ್ಸ್ ಸೇವಾ ಸದನದಲ್ಲಿ ಹಮ್ಮಿಕೊಳ್ಳಲಾದ ಶಿಬಿರವನ್ನು ಉದ್ಯಾವರ ಗ್ರಾಮ ಪಂಚಾಯತ್ ಅದ್ಯಕ್ಷೆ ಮಾಲತಿ ಸಾಲಿಯಾನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕೆಎಂಸಿ ಮಣಿಪಾಲದ ನರವಿಜ್ಞಾನ ವಿಭಾಗದ ಡಾ.ಶರತ್ ಪಿ.ಎಸ್. ಅಪಸ್ಮಾರ ಕಾಯಿಲೆ ಬಗ್ಗೆ ವಿವರವಾದ ಮಾಹಿತಿಗಳನ್ನು ನೀಡಿದರಲ್ಲದೇ, ಜನರ ಪ್ರಶ್ನೆಗಳಿಗೂ ಉತ್ತರಿಸಿದರು.
ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕಿ ಪ್ರೊ. ಡಾ. ದಿವ್ಯ ವಿ. ಪೈ, ಉದ್ಯಾವರ ಗ್ರಾಪಂ ಉಪಾಧ್ಯಕ್ಷ ರಾಜೇಶ್ ಕುಂದರ್, ಕುತ್ಪಾಡಿ ಎಸ್‌ಸಿಐ ಅಧ್ಯಕ್ಷ ಪ್ರತಾಪಕುಮಾರ್, ಲಯನ್ಸ್ ಕ್ಲಬ್ ಉದ್ಯಾವರದ ಕಾರ್ಯದರ್ಶಿ ಉದಯಕಿರಣ ಕುತ್ಪಾಡಿ, ಉದ್ಯಾವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರವೀಂದ್ರ ಮುಂತಾದವರು ಉಪಸ್ಥಿತರಿದ್ದರು.
ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಇಸಿಜಿ ತಪಾಸಣೆ ನಡೆಸಲಾ ಯಿತು. 60ಕ್ಕೂ ಅಧಿಕ ಶಿಬಿರಾರ್ಥಿಗಳು ಶಿಬಿರದ ಪ್ರಯೋಜನ ಪಡೆದು ಕೊಂಡರು. ಸಮುದಾಯ ವೈದ್ಯಕೀಯ ವಿಭಾಗದ ವಿದ್ಯಾ ಕಾರ್ಯಕ್ರಮ ನಿರ್ವಹಿಸಿದರು.







