ವಿಶ್ವ ಛಾಯಾಗ್ರಹಣ ದಿನಾಚರಣೆ: ನೇತ್ರ ತಪಾಸಣಾ ಶಿಬಿರ, ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ

ಉಡುಪಿ, ಆ.19: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿ ಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಇದರ ಉಡುಪಿ ವಲಯದ ವತಿಯಿಂದ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಸಹಯೋಗ ದೊಂದಿಗೆ ವಿಶ್ವ ಛಾಯಾಗ್ರಹಣ ದಿನಾಚರಣೆಯ ಪ್ರಯುಕ್ತ ಉಚಿತ ನೇತ್ರ ತಪಾಸಣಾ ಶಿಬಿರ ಉಡುಪಿಯ ಜಗನ್ನಾಥ ಸಭಾಭವನ ದಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣಪ್ರಸಾದ್ ಮಾತನಾಡಿ, ಎಲ್ಲಾ ಫೋಟೋ ಗ್ರಾಫರ್ ಸಂಘಟನೆಗಿಂತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿ ಯೇಷನ್ ಭಿನ್ನವಾಗಿದೆ. ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದೊಂದಿಗೆ ಕೈಜೋಡಿಸಿದೆ. ಛಾಯಾಗ್ರಹಕರಿಗೆ ಕಣ್ಣು ಅತ್ಯಮೂಲ್ಯ. ಛಾಯಾಗ್ರಹಕರ ಕಣ್ಣಿನ ಸಮಸ್ಯೆಗೆ ತಮ್ಮ ಸಂಸ್ಥೆಯ ವತಿಯಿಂದ ಪರಿಹಾರ ನೀಡಲು ನಾವು ಸದಾ ಸಿದ್ದ ಎಂದರು.
ವಿಶ್ವ ಛಾಯಾಗ್ರಹಣ ದಿನಾಚರಣೆಯ ಪ್ರಯುಕ್ತ ಹಿರಿಯ ಛಾಯಾ ಗ್ರಾಹಕ ಲಕ್ಷ್ಮೀನಾರಾಯಣ ಉಪಾಧ್ಯಾಯ ಅವರನ್ನು ಸನ್ಮಾನಿಸಲಾಯಿತು. ನೂರಕ್ಕೂ ಹೆಚ್ಚು ಛಾಯಾಗ್ರಾಹಕರು ಮತ್ತು ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಂಡರು.
ವಲಯದ ಅಧ್ಯಕ್ಷ ಸುದೀರ್ ಎಂ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿಯ ಉಪಾಧ್ಯಕ್ಷ ಪ್ರವೀಣ್ ಕೊರೆಯ, ವಲಯದ ಗೌರವಾಧ್ಯಕ್ಷ ನವೀನ್‌ಚಂದ್ರ ಬಳ್ಳಾಲ್, ಕೋಶಾಧಿಕಾರಿ ರಮೇಶ್ ಭಟ್ ಎಲ್ಲೂರು, ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ದಿವಾಕರ್ ಹಿರಿಯಡಕ ವಂದಿಸಿ, ರಾಘವೇಂದ್ರ ಸೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.







