ಪ್ರತಿ ಮನೆಮನಕ್ಕೆ ಯಕ್ಷಗಾನ ತಲುಪಿಸಲು ಅಕಾಡೆಮಿ ಪ್ರಯತ್ನ: ಡಾ.ತಲ್ಲೂರು ಶಿವರಾಮ ಶೆಟ್ಟಿ
ಯಕ್ಷಗಾನ ಅಕಾಡೆಮಿಯಿಂದ ಕವಲಕ್ಕಿಯಲ್ಲಿ ವಿಚಾರ ಸಂಕಿರಣ

ಉಡುಪಿ: ಒಂದು ಕಾಲದಲ್ಲಿ ರಾಜಾಶ್ರಯ ಪಡೆದು ಮೆರೆದಿದ್ದ ಕನ್ನಡ ಕರಾವಳಿಯ ಶ್ರೀಮಂತ ಯಕ್ಷಗಾನ ಕಲೆಯನ್ನು ಪ್ರತೀ ಮನೆಮನಕ್ಕೆ ತಲುಪಿಸಿ ಗತಿಸಿದ ವೈಭವವನ್ನು ಮತ್ತೆ ಪಡೆಯಲು ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಯತ್ನಿಸಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕವಲಕ್ಕಿ ಶ್ರೀಮಹಾಸತಿ ದೇವಳದ ಸಭಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಯಕ್ಷಗಾನ ವಿಚಾರ ಸಂಕಿರಣ, ಗೋಷ್ಠಿ, ತಾಳಮದ್ದಲೆ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಕ್ಷಗಾನ ಇಂದು ಸಮಷ್ಠಿಯನ್ನು ಒಳಗೊಂಡ ಪರಿಪೂರ್ಣ ಕಲೆಯಾಗಿ ಬೆಳೆದಿದೆ. ಇಲ್ಲಿ ವೃತ್ತಪರ ಕಲಾವಿದರಲ್ಲದೆ, ಹವ್ಯಾಸಿಗಳಾಗಿ ವೈದ್ಯರು, ಇಂಜಿನಿಯರ್‌ಗಳು, ಸಾಹಿತಿಗಳು, ಅಧ್ಯಾಪಕರು ಹೀಗೆ ಎಲ್ಲಾ ಕ್ಷೇತ್ರದ ವ್ಯಕ್ತಿ ಗಳು ತಮ್ಮನ್ನು ಕಲೆಗೆ ಮುಡಿಪಾಗಿಟ್ಟಿದ್ದಾರೆ. ಇದು ಯಕ್ಷಗಾನ ಕಲೆಯ ವೈಶಿಷ್ಟ್ಯ. ಇದನ್ನು ಅನ್ಯ ಕಲೆಗಳಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ತೆಂಕುತಿಟ್ಟು, ಬಡಗುತಿಟ್ಟು, ಉತ್ತರಕನ್ನಡ ಕಡೆಯ ಬಡಾಬಡಗುತಿಟ್ಟು ಹೀಗೆ ವಿವಿಧ ಪ್ರಕಾರಗಳ ಮೂಲಕ ಯಕ್ಷಗಾನ ಜನಮಾನಸದಲ್ಲಿ ನೆಲೆಸಿದೆ. ಉತ್ತರ ಕನ್ನಡ ಜಿಲ್ಲೆಯಂತೂ ಅಗಣಿತ ಮೇರು ಯಕ್ಷಗಾನ ಕಲಾವಿದರನ್ನು ನಾಡಿಗೆ ನೀಡಿದೆ. ಚಿಟ್ಟಾಣಿಯಂತಹ ದಿಗ್ಗಜರಿಗೆ ಪದ್ಮಶ್ರೀ ಗೌರವ ಸಂದಿರುವುದನ್ನು ಕೂಡಾ ಮರೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಯಕ್ಷಗಾನ ಕಲೆ ಪ್ರತಿ ಮನೆ, ಮನವನ್ನು ಮುಟ್ಟಲು ಮಕ್ಕಳಿಗೆ ಯಕ್ಷಗಾನ ಕಲಿಸಬೇಕು. ಉಡುಪಿ ಜಿಲ್ಲೆಯಲ್ಲಿ ೯೦ಕ್ಕೂ ಅಧಿಕ ಶಾಲೆಗಳಲ್ಲಿ ೩,೦೦೦ಕ್ಕೂ ಅಧಿಕ ಮಕ್ಕಳು ಯಕ್ಷ ಶಿಕ್ಷಣ ಪಡೆಯುತ್ತಿದ್ದಾರೆ. ಇದು ರಾಜ್ಯದ ಅನ್ಯ ಜಿಲ್ಲೆಗಳಿಗೂ ಮುಟ್ಟಬೇಕು ಎಂಬುದೇ ಅಕಾಡೆಮಿಯ ಬಯಕೆ. ಯಕ್ಷಗಾನ ಕಲಿತ ಮಕ್ಕಳು ಸಂಸ್ಕಾರ ಹೀನರಾಗಲಾರರು. ವೃದ್ಧಾಪ್ಯದಲ್ಲಿ ತಂದೆತಾಯಿ ಯನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪ್ರಮೇಯ ತರಲಾರರು. ಯಾಕೆಂದರೆ ಯಕ್ಷಗಾನದಲ್ಲಿ ಗುರುಹಿರಿಯರನ್ನು ತಂದೆತಾಯಿಯನ್ನು ಗೌರವಿಸುವ ನೈತಿಕ ಶಿಕ್ಷಣದ ಪಾಠ ಲಭಿಸುತ್ತದೆ. ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ವಿಕಸನದ ಜೊತೆಗೆ ಅವರ ಶೈಕ್ಷಣಿಕ ಪ್ರಗತಿಗೂ ಕಾರಣವಾಗಿರುವುದನ್ನು ನಾವು ಗಮನಿಸಿದ್ದೇವೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಬಳ್ಕೂರು ಕೃಷ್ಣ ಯಾಜಿ, ಯಕ್ಷಗಾನ ಒಂದು ಆರಾಧನಾ ಕಲೆ. ಜನರಿಗೆ ಸಂತೋಷ ಕೊಡುವುದು ಎಂದರೆ ಈಶ್ವರನಿಗೆ ಆರಾಧನೆ ಮಾಡಿದ ಹಾಗೆ. ಯಕ್ಷಗಾನ ಹಾದಿ ತಪ್ಪುತ್ತಿದೆ ಎಂಬ ಅಪವಾದ ಕೇಳಿ ಬರುತ್ತಿದೆ. ಆರಂಭದಿಂದ ಇಂದಿನವರೆಗೆ ಯಕ್ಷಗಾನ ಕಲೆ ಅನೇಕ ಸುಧಾರಣೆಗಳನ್ನು ಕಂಡಿದೆ. ಹಾಗಾಗಿ ಇದು ಅಳಿಯುವ ಕಲೆ ಅಲ್ಲ ಎಂದರು.
ಅಕಾಡೆಮಿ ಸದಸ್ಯ ವಿದ್ಯಾಧರ ಜಲವಳ್ಳಿ ಮಾತನಾಡಿ, ಉತ್ತರ ಕನ್ನಡದ ಯಕ್ಷಗಾನ ಕಲಾವಿದರನ್ನು ಗುರುತಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕಪ್ಪೆಕೆರೆ ಸುಬ್ರಾಯ ಭಾಗವತರಿಗೆ ರಾಜ್ಯೋತ್ಸವ ಪ್ರಶಸ್ತಿ ಇನ್ನೂ ಲಭಿಸದಿರುವುದು ಬೇಸರದ ಸಂಗತಿ ಎಂದರು.
ಅಕಾಡೆಮಿ ರಿಜಿಸ್ಟ್ರಾರ್ ನಮೃತಾ ಎನ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಭಾಗವತ ಕಪ್ಪೆಕೆರೆ ಸುಬ್ರಾಯ ಭಾಗವತ, ಕಡತೋಕ ಗೋಪಾಲಕೃಷ್ಣ ಭಾಗವತ, ಯಕ್ಷಗಾನ ವಿಮರ್ಶಕ ನಾರಾಯಣ ಯಾಜಿ ಸಂದರ್ಭೋಚಿತ ಮಾತುಗಳನ್ನಾಡಿದರು.
ಉದ್ಯಮಿ ವೆಂಕಟರಮಣ ಹೆಗ್ಡೆ, ಸಂಗೀತ ವಿದ್ವಾನ್ ಪಾಡಿಗಾರು ಲಕ್ಷ್ಮೀ ನಾರಾಯಣ ಉಪಾಧ್ಯಾಯ ಉಪಸ್ಥಿತರಿದ್ದರು. ಉಪನ್ಯಾಸಕ ಪ್ರಶಾಂತ್ ಹೆಗ್ಡೆ ನಿರೂಪಿಸಿ, ವಂದಿಸಿದರು. ಮಕ್ಕಳ ಯಕ್ಷಗಾನ ಪ್ರದರ್ಶನ, ತಾಳ ಮದ್ದಲೆ, ಯಕ್ಷಗಾನ ವಿಚಾರಗೋಷ್ಠಿಗಳು ನಡೆದವು.







