ಭಟ್ಕಳ| ಬಾಲಕನಿಗೆ ದ್ವಿಚಕ್ರ ವಾಹನ ಚಾಲನೆಗೆ ಅವಕಾಶ: ವಾಹನದ ಮಾಲಕಿಗೆ 25 ಸಾವಿರ ರೂ. ದಂಡ

ಭಟ್ಕಳ: ಅಪ್ರಾಪ್ತ ವಯಸ್ಸಿನ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ ಪ್ರಕರಣದಲ್ಲಿ ವಾಹನದ ಮಾಲಕಿ ಗೆ ಭಟ್ಕಳ ನ್ಯಾಯಾಲಯವು 25 ಸಾವಿರ ರೂ. ದಂಡ ವಿಧಿಸಿದೆ.
ಮುರ್ಡೇಶ್ವರ ಠಾಣೆ ವ್ಯಾಪ್ತಿಯ ನ್ಯಾಶನಲ್ ಕಾಲನಿಯ ನಿವಾಸಿ ಸೀಮಾ ಅಖ್ತರ್ ಶೇಖ್ ಮುಹಿಯುದ್ದೀನ್ ಶಿರೂರು ಅವರು ಅಪ್ರಾಪ್ತ ವಯಸ್ಸಿನ ಬಾಲಕನಿಗೆ ತಮ್ಮ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ್ದರು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ಮುರ್ಡೇಶ್ವರ ಪೊಲೀಸರು, ವಾಹನ ಮಾಲಕಿಯ ವಿರುದ್ಧ ಮೋಟರ್ ವಾಹನ ಕಾಯ್ದೆಯ ಸೆಕ್ಷನ್ 5 ಮತ್ತು 199(ಎ) ಅಡಿಯಲ್ಲಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಭಟ್ಕಳ ಹಿರಿಯ ಸಿವಿಲ್ ನ್ಯಾಯಾಲಯವು ವಾಹನ ಮಾಲಕಿಯನ್ನು ತಪ್ಪಿತಸ್ಥಳೆಂದು ಪರಿಗಣಿಸಿ, ಜೂನ್ 2ರಂದು ರೂ.25 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಬಾರದು. ನಿಯಮ ಉಲ್ಲಂಘಿಸುವ ಪೋಷಕರು ಹಾಗೂ ವಾಹನ ಮಾಲಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.




