ಮೇ ತಿಂಗಳಲ್ಲಿ ಹೊಸ ಎತ್ತರಕ್ಕೇರಿದ ಯುಪಿಐ ವಹಿವಾಟು

PC: x.com/Indianinfoguide
ಮುಂಬೈ: ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ) ವಹಿವಾಟಿನ ಮೂಲಕ ದೇಶ ಡಿಜಿಟಲ್ ಭವಿಷ್ಯವನ್ನು ಎದುರು ನೋಡುತ್ತಿದ್ದು, ದಿನಕ್ಕೆ 60 ಕೋಟಿ ಯುಪಿಐ ವಹಿವಾಟುಗಳು ನಡೆಯುತ್ತಿವೆ. ಜೊತೆಗೆ ನಗದು ವ್ಯವಹಾರ ಕೂಡಾ ಉತ್ತೇಜನ ಪಡೆದಿದೆ.
ಮೇ ತಿಂಗಳಲ್ಲಿ ಯುಪಿಐ ವಹಿವಾಟು ದಾಖಲೆ ಮಟ್ಟವನ್ನು ತಲುಪಿದ್ದು, ಒಟ್ಟು 25.1 ಲಕ್ಷ ಕೋಟಿ ರೂಪಾಯಿ ಮೌಲ್ಯದ 1868 ಕೋಟಿ ವಹಿವಾಟುಗಳು ಯುಪಿಐ ಮೂಲಕ ನಡೆದಿವೆ. ಏಪ್ರಿಲ್ ತಿಂಗಳಲ್ಲಿ 23.9 ಲಕ್ಷ ಕೋಟಿ ರೂಪಾಯಿ ಮೌಲ್ಯದ 1789 ಕೋಟಿ ವಹಿವಾಟುಗಳು ಯುಪಿಐ ಮೂಲಕ ನಡೆದಿದ್ದವು.
ಆದರೆ ಮಾರ್ಚ್ ಕೊನೆಯ ವೇಳೆಗೆ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ ಕೂಡಾ ದಾಖಲೆ ಮಟ್ಟ ಅಂದರೆ 36.86 ಲಕ್ಷ ಕೋಟಿಗೆ ತಲುಪಿದೆ. ಪ್ರಮುಖವಾಗಿ 500 ರೂಪಾಯಿ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿ ಅಧಿಕವಾಗಿದ್ದು, ಒಟ್ಟು ನೋಟುಗಳ ಪ್ರಮಾಣದ ಶೇಕಡ 41ರಷ್ಟಿವೆ ಹಾಗೂ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯದ ಶೇಕಡ 86ರಷ್ಟು ಪಾಲನ್ನು ಹೊಂದಿವೆ. ಇದಕ್ಕೆ ವಿರುದ್ಧವಾಗಿ 20, 50, 100 ಮತ್ತು 200 ರೂಪಾಯಿ ಮೌಲ್ಯದ ನೋಟುಗಳ ಒಟ್ಟು ಸಂಖ್ಯೆ ಶೇಕಡ 35.6ರಷ್ಟು ಮಾತ್ರ ಇದ್ದು, ಮೌಲ್ಯದಲ್ಲಿ ಶೇಕಡ 10.9ರಷ್ಟು ಮಾತ್ರ ಇವೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕಡಿಮೆ ಮೌಲ್ಯದ ನೋಟುಗಳ ಚಲಾವಣೆ ಮತ್ತು ಡಿಜಿಟಲ್ ಪಾವತಿ ಬಗ್ಗೆ ಸರ್ಕಾರ ಬದ್ಧತೆ ಹೊಂದಿದೆ ಎಂದು ತಿಳಿಸಿದ್ದರು. ಕಡಿಮೆ ಮೌಲ್ಯದ ನೋಟುಗಳು ಅಧಿಕ ಮೌಲ್ಯದ ನೋಟುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಚಲಾವಣೆಯಾಗುವುದನ್ನು ಖಾತರಿಪಡಿಸಲು ಪ್ರಯತ್ನ ಅಗತ್ಯ ಎಂದು ಹೇಳಿದ್ದರು. 2025ರ ಸೆಪ್ಟೆಂಬರ್ 30ರ ವೇಳೆಗೆ ಕನಿಷ್ಠ ಶೇಕಡ 75ರಷ್ಟು ಎಟಿಎಂಗಳಲ್ಲಿ ಮತ್ತು 2026ರ ಮಾರ್ಚ್ ವೇಳೆಗೆ ಶೇಕಡ 90ರಷ್ಟು ಎಟಿಎಂಗಳಲ್ಲಿ 100 ಮತ್ತು 200 ರೂಪಾಯಿ ನೋಟುಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆರ್ಬಿಐ ಸೂಚಿಸಿದೆ.
ದೈನಂದಿನ ವಹಿವಾಟುಗಳಲ್ಲಿ ಅಧಿಕ ಮೌಲ್ಯದ ನೋಟುಗಳ ಅವಲಂಬನೆಯನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.







