ಉತ್ತರ ಪ್ರದೇಶ: ಮಂಗಗಳ ದಾಳಿ; ಟೆರೇಸ್ ನಿಂದ ಬಿದ್ದು ಬಾಲಕಿ ಮೃತ್ಯು

ಸಾಂದರ್ಭಿಕ ಚಿತ್ರ Photo: freepik
ಬರೇಲಿ: ಅಜ್ಜನೊಂದಿಗೆ ಆಡುತ್ತಾ ಕುಳಿತಿದ್ದ ಆರು ವರ್ಷದ ಬಾಲಕಿಯನ್ನು ಮಂಗಗಳ ಗುಂಪೊಂದು ದಿಢೀರನೇ ಅಟ್ಟಿಸಿಕೊಂಡು ಬಂದಾಗ ಬೆದರಿದ ಬಾಲಕಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಟೆರೇಸ್ ನಿಂದ ಬಿದ್ದು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಸಿರ್ಸಿ ಪಟ್ಟಣದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಮೃತಪಟ್ಟ ಬಾಲಕಿಯನ್ನು ಎರಡನೇ ತರಗತಿ ವಿದ್ಯಾರ್ಥಿನಿ ಕೃತಿ ಎಂದು ಗುರುತಿಸಲಾಗಿದೆ. ಬಾಲಕಿ ತನ್ನ ಅಜ್ಜನ ಜತೆಗೆ ಮನೆಯ ಟೆರೇಸ್ ನಲ್ಲಿ ಹರಟುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ತೀವ್ರ ಗಾಯಗಳಾಗಿದ್ದ ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆ ವೇಳೆಗಾಗಲೇ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.
"ಮಂಗಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಭೀತಿಯಿಂದ ಮೆಟ್ಟಲಿನ ಬಳಿಗೆ ಓಡಿಬಂದ ಮಗಳು. ಕಾಲು ಜಾರಿ ಛಾವಣಿಯಿಂದ ಬಿದ್ದಿದ್ದಾಳೆ. ತೀವ್ರವಾಗಿ ಗಾಯಗೊಂಡಿದ್ದರಿಂದ ಆಕೆ ಚೇತರಿಸಿಕೊಳ್ಳುವ ಸಾಧ್ಯತೆ ಇರಲಿಲ್ಲ" ಎಂದು ಬಾಲಕಿಯ ತಂದೆ ಕಮಲ್ ದೀಪ್ ಹೇಳಿದ್ದಾರೆ.
ಮಂಗಗಳು ಹಾಗೂ ಬೀದಿನಾಯಿಗಳ ಕಾಟದಿಂದ ಈ ಪ್ರದೇಶದ ಎಲ್ಲರೂ ತೊಂದರೆ ಅನುಭವಿಸುತ್ತಿದ್ದು, ಇದರ ನಿಯಂತ್ರಣಕ್ಕೆ ಆಡಳಿತ ವರ್ಗ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಬಾಲಕಿಯ ದೇಹವನ್ನು ಶವಪರೀಕ್ಷೆಗೆ ನೀಡಲು ಕುಟುಂಬ ನಿರಾಕರಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೂರು ದಿನದಲ್ಲಿ ಇದು ಇಂತಹ ಎರಡನೇ ಪ್ರಕರಣವಾಗಿದ್ದು, ಎರಡು ದಿನಗಳ ಹಿಂದಷ್ಟೇ ಮನೆಯ ಟೆರೇಸ್ನಲ್ಲಿ ಆಹಾರ ಸೇವಿಸುತ್ತಿದ್ದ ಸೋಮತಿ ದೇವಿ (40) ಮಂಗಗಳ ದಾಳಿಗೊಳಗಾಗಿ ಛಾವಣಿಯಿಂದ ಬಿದ್ದು ಮೃತಪಟ್ಟಿದ್ದರು.







