ಮೃತ ಮೀನುಗಾರರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ನೀಡಿದ ಸಚಿವ ಮಂಕಾಳ್ ವೈದ್ಯ

ಭಟ್ಕಳ: ತಾಲೂಕಿನ ಅಳ್ವೆ ಕೊಡಿ ಸಮುದ್ರದಲ್ಲಿ ಜುಲೈ 30 ರಂದು ತೀವ್ರವಾದ ಅಲೆಗಳ ಕಾರಣದಿಂದಾಗಿ ದೋಣಿ ಮಗುಚಿಕೊಂಡು ಮೀನುಗಾರಿಕೆಗೆ ತೆರಳಿದ್ದ ಆರು ಮೀನುಗಾರರು ದುರಂತಕ್ಕೀಡಾಗಿದ್ದರು. ಈ ಪೈಕಿ ಇಬ್ಬರು ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದರೆ, ಉಳಿದ ನಾಲ್ಕು ಮೀನುಗಾರರು ತೀವ್ರವಾದ ನೀರಿನ ಸೆಳೆತದಲ್ಲಿ ಕಾಣೆಯಾಗಿದ್ದರು. ಕಾಣೆಯಾಗಿದ್ದ ನಾಲ್ಕು ಮೀನುಗಾರರ ಪೈಕಿ ಇಬ್ಬರ ಮೃತದೇಹಗಳು ಈಗಾಗಲೇ ಪತ್ತೆಯಾಗಿವೆ. ಆದರೆ, ಉಳಿದ ಇಬ್ಬರು ಮೀನುಗಾರರ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ ಅವರು, ಜಾಲಿಯ ನಿವಾಸಿ ರಾಮಕೃಷ್ಣ ಮೊಗೇರ, ಅಳ್ವೆ ಕೊಡಿಯ ಗಣೇಶ್ ಮೊಗೇರ, ಸಣಬಾವಿಯ ನಿವಾಸಿ ಸತೀಶ್ ಮೊಗೇರ ಹಾಗೂ ಮುರ್ಡೇಶ್ವರದ ನಿಶಿತ್ ಮೊಗೇರ ಅವರ ಮನೆಗಳಿಗೆ ಭೇಟಿ ನೀಡಿ, ದುರಂತಕ್ಕೊಳಗಾದ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಜೊತೆಗೆ, ನೀರಿನಲ್ಲಿ ಮುಳುಗಿ ಮೃತಪಟ್ಟ ಇಬ್ಬರು ಮೀನುಗಾರರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಸರ್ಕಾರಿ ಪರಿಹಾರದ ಚೆಕ್ ವಿತರಿಸಿದರು.ಅಲ್ಲದೇ, ಸಮುದ್ರದ ಅಲೆಗಳಲ್ಲಿ ಕಾಣೆಯಾಗಿರುವ ಇಬ್ಬರು ಮೀನುಗಾರರ ಕುಟುಂಬಗಳಿಂದ ಒಪ್ಪಂದ ಪತ್ರ (ಇಂಡೆಮ್ನಿಟಿ ಬಾಂಡ್) ಪಡೆದು, ಅವರಿಗೂ ತಲಾ 10 ಲಕ್ಷ ರೂ. ಸರ್ಕಾರಿ ಪರಿಹಾರವನ್ನು ವಿತರಿಸಲಾಯಿತು. ಜೊತೆಗೆ, ದುರಂತಕ್ಕೊಳಗಾದ ಮೀನುಗಾರರ ದೋಣಿಯ ನಷ್ಟದ ಭರಪಾಯಿಗಾಗಿ ದೋಣಿಯ ಮಾಲೀಕರಿಗೆ 4.5 ಲಕ್ಷ ರೂ. ಸರ್ಕಾರಿ ಪರಿಹಾರದ ಚೆಕ್ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಂಕಾಳ ವೈದ್ಯ, "ಈ ಹಿಂದೆ ಯಾವುದೇ ಸರ್ಕಾರವು ಸಮುದ್ರದಲ್ಲಿ ಕಾಣೆಯಾದ ಮೀನುಗಾರರಿಗೆ ಮೀನುಗಾರಿಕೆ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ನೀಡಿ, ದುರಂತ ಕ್ಕೊಳಗಾದ ಕುಟುಂಬಗಳ ಕಣ್ಣೀರು ಒರೆಸುವ ಕೆಲಸ ಮಾಡಿರಲಿಲ್ಲ. ಆದರೆ, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರವು ಕಾಣೆಯಾದ ಮೀನುಗಾರರ ಕುಟುಂಬ ಗಳಿಗೂ ಪರಿಹಾರ ನೀಡುವ ಕಾರ್ಯ ಮಾಡಿದೆ. ನಮ್ಮ ಸರ್ಕಾರ, ಮೀನುಗಾರಿಕೆ ಇಲಾಖೆ ಮತ್ತು ನಾನು ಸದಾ ಮೀನುಗಾರರಿಗೆ ಬೆಂಬಲವಾಗಿ ನಿಂತು, ಅವರ ಕುಟುಂಬಗಳಿಗೆ ರಕ್ಷಣೆ ಒದಗಿಸುತ್ತೇವೆ" ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು, ಸ್ಥಳೀಯ ಮೀನುಗಾರರ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.







