ಭಟ್ಕಳ| ಎಐಎಂಸಿಎಯಲ್ಲಿ ಸಿವಿಲ್ ಸರ್ವಿಸ್ ಜಾಗೃತಿ ಕಾರ್ಯಕ್ರಮ

ಭಟ್ಕಳ: ಭಟ್ಕಳದ ಅಂಜುಮಾನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆಂಡ್ ಕಂಪ್ಯೂಟರ್ ಅಪ್ಲಿಕೇಶನ್ (ಎಐಎಂಸಿಎ)ಯಲ್ಲಿ ರಾಬಿತಾ ಸೊಸೈಟಿ, ಭಟ್ಕಳ ಮತ್ತು ಎಸಿಇ ಸಿವಿಲ್ ಸರ್ವಿಸ್ ಅಕಾಡೆಮಿ, ಮಂಗಳೂರು ಇವರ ಸಹಯೋಗದೊಂದಿಗೆ “ನಿಮ್ಮ ಯುಪಿಎಸ್‌ಸಿ (ಐಎಎಸ್, ಕೆಎಎಸ್) ಮತ್ತು ಇತರೆ ಕ್ಷೇತ್ರಗಳ ಕಡೆಗಿನ ರೋಡ್ ಮ್ಯಾಪ್” ಎಂಬ ಶೀರ್ಷಿಕೆಯಡಿ ಸಿವಿಲ್ ಸರ್ವಿಸ್ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಮುಶಾಹಿದ್ ಅಹ್ಮದ್ (ಪೊಲೀಸ್ ಸಬ್-ಇನ್‌ಸ್ಪೆಕ್ಟರ್, ದಕ್ಷಿಣ ಕನ್ನಡ), ಮುಹಮ್ಮದ್ ರಫೀಕ್ ಮಾಸ್ಟರ್ (ಪ್ರೇರಣಾತ್ಮಕ ವಕ್ತಾರ ಮತ್ತು ಶೈಕ್ಷಣಿಕ ಸಲಹೆಗಾರ), ಸಯ್ಯದ್ ಸಾದತ್ ಪಾಷಾ (ಐಎಎಸ್/ಕೆಎಎಸ್ ತರಬೇತುದಾರ, ಬೆಂಗಳೂರು), ಮತ್ತು ನಝೀರ್ ಅಹ್ಮದ್ (ನಿರ್ದೇಶಕ, ಎಸಿಇ ಐಎಎಸ್ ಸಿವಿಲ್ ಸರ್ವಿಸ್ ಅಕಾಡೆಮಿ, ಮಂಗಳೂರು) ಭಾಗವಹಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಐಎಎಸ್, ಐಪಿಎಸ್, ಕೆಎಎಸ್ ಮುಂತಾದ ಸಿವಿಲ್ ಸರ್ವಿಸ್‌ಗಳ ಜೊತೆಗೆ ರೈಲ್ವೇ ಮತ್ತು ಸಾರ್ವಜನಿಕ ವಲಯದ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದ್ದು, ಪರೀಕ್ಷಾ ತಯಾರಿಗೆ ಸಂಬಂಧಿಸಿದ ಕಾರ್ಯತಂತ್ರಗಳನ್ನು ಹಂಚಿಕೊಂಡು, ರಾಷ್ಟ್ರ ನಿರ್ಮಾಣದ ಕೆಲಸದಲ್ಲಿ ಭಾಗಿಯಾಗುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಪರೀಕ್ಷೆಗಳಿಗೆ ತಯಾರಿ ನಡೆಸಲು ಆಸಕ್ತಿ ತೋರಿದರು.
ಅಂಜುಮನ್ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಇಸ್ಹಾಕ್ ಶಾಬಂದ್ರಿ ರಾಬಿತಾ ಸೂಸೈಟಿಯ ಪ್ರಧಾನ ಕಾರ್ಯದರ್ಶಿ ಡಾ. ಅತೀಕ್‌ಉರ್‌ರಹಮಾನ್ ಮುನೀರಿ, ಎಐಎಂಸಿಎ ಪ್ರಾಂಶುಪಾಲ ಮೊಹ್ಸಿನ್ ಕೆ, ಮತ್ತಿತರರು ಉಪಸ್ಥಿತರಿದ್ದರು.







