ಭಟ್ಕಳ: ಗಣೇಶೋತ್ಸವ ಶಾಂತಿಯುತ ಆಚರಣೆಗೆ ಸಹಾಯಕ ಆಯುಕ್ತರಿಂದ ಸೂಚನೆ

ಭಟ್ಕಳ: ಗಣೇಶೋತ್ಸವ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ನಿಟ್ಟಿನಲ್ಲಿ ಭಟ್ಕಳದ ಸಹಾಯಕ ಆಯುಕ್ತೆ ಕಾವ್ಯಾರಾಣಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ಶಾಂತಿ ಸಭೆ ನಡೆಯಿತು.
ಸಭೆಯಲ್ಲಿ ಭಟ್ಕಳ ಡಿವೈಎಸ್ಪಿ ಮಹೇಶ ಕೆ. ಮಾತನಾಡಿ, ಗಣೇಶೋತ್ಸವವನ್ನು ಶಾಂತಿಯುತವಾಗಿ ಸಂಭ್ರಮದಿಂದ ಆಚರಿಸಲು ಸರ್ಕಾರದಿಂದ ಸುತ್ತೋಲೆ ಜಾರಿಯಾಗಿದೆ. ಸಮಿತಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ, ಸಾರ್ವಜನಿಕ ಸಮಸ್ಯೆಗಳಿಗೆ ಆಸ್ಪದವಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು. ವಾಹನ ಸಂಚಾರ ನಿಯಂತ್ರಣಕ್ಕೆ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು, ಮೆರವಣಿಗೆ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಗಣೇಶ ವಿಸರ್ಜನೆಗೆ ಚೌಥನಿ ಹೊಳೆಯಲ್ಲಿ ಸೂಕ್ತ ವ್ಯವಸ್ಥೆಗೆ ಪುರಸಭೆಗೆ ಸೂಚನೆ ನೀಡಲಾಯಿತು. ತಾಲೂಕಿನಾದ್ಯಂತ 121 ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪರವಾನಗಿ ನೀಡಲಾಗಿದೆ. ಇದರಲ್ಲಿ 17 ನಗರ ಭಾಗ, 66 ಗ್ರಾಮೀಣ ಭಾಗ, ಮತ್ತು 38 ಮುರುಡೇಶ್ವರದಲ್ಲಿವೆ. ಅಳ್ವೇಕೋಡಿಯ ಸಮುದ್ರ ಅವಘಡವನ್ನು ಸ್ಮರಿಸಿ, ವಿಸರ್ಜನೆ ಸಂದರ್ಭದಲ್ಲಿ ಗಣೇಶ ಸಮಿತಿಗಳು ಮತ್ತು ಗ್ರಾಮ ಪಂಚಾಯಿತಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಸ್ಪಿ ಸೂಚಿಸಿದರು.
ಗ್ರಾಮೀಣ ಠಾಣೆ ಸಿಪಿಐ ಮಂಜುನಾಥ ಲಿಂಗಾರೆಡ್ಡಿ, ಸಮಿತಿಗಳ ಸಮೀಪ ಬ್ಯಾರಿಕೇಡ್‌ಗಳನ್ನು ಜಾಲಿ ಪಟ್ಟಣ ಪಂಚಾಯಿತಿನಿಂದ ವ್ಯವಸ್ಥೆಗೊಳಿಸಲು ಮನವಿ ಮಾಡಿದರು. ಪುರಸಭೆ ಮುಖ್ಯಾಧಿಕಾರಿ, ಚೌಥನಿ ಹೊಳೆಯಲ್ಲಿ ಬೆಳಕಿನ ವ್ಯವಸ್ಥೆ (ಫೋಕಸ್ ಲೈಟ್) ಮತ್ತು ಮೆರವಣಿಗೆ ಮಾರ್ಗದಲ್ಲಿ ಸ್ವಚ್ಛತೆ ಕಾರ್ಯಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ನಗರ ಠಾಣೆ ಸಿಪಿಐ ದಿವಾಕರ, ಡಿಜೆ ಬಳಕೆಯನ್ನು ಸರ್ಕಾರ ನಿಷೇಧಿಸಿದೆ ಎಂದು ತಿಳಿಸಿದರೂ, ಕೆಲವು ಸಮಿತಿಗಳಿಂದ ಚರ್ಚೆ ಉದ್ಭವಿಸಿತು. ಆದರೆ, ಸಹಾಯಕ ಆಯುಕ್ತರು ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಒತ್ತಾಯಿಸಿದರು.
ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ,. ಮಣ್ಕುಳಿ ಗಣೇಶೋತ್ಸವ ಸಮಿತಿಯ ಸುರೇಶ ನಾಯ್ಕ ಕೋಣೆಮನೆ, ಕುಮಾರ ನಾಯ್ಕ ಹನುಮಾನನಗರ, ವೆಂಕಟೇಶ ನಾಯ್ಕ ಮತ್ತು ಶ್ರೀಧರ ನಾಯ್ಕ ಮತ್ತಿತರರು ಮಾತನಾಡಿದರು.
ಸಹಾಯಕ ಆಯುಕ್ತೆ ಕಾವ್ಯಾರಾಣಿ, ಗಣೇಶೋತ್ಸವವು ಭಾವನಾತ್ಮಕ ಮತ್ತು ಐತಿಹಾಸಿಕ ಹಿನ್ನೆಲೆಯಿಂದ ಒಗ್ಗಟ್ಟಿನ ಸಂಕೇತವಾಗಿದೆ, ಪಿಒಪಿ ಗಣೇಶ ಮೂರ್ತಿಗಳನ್ನು 2023ರ ಸುತ್ತೋಲೆಯಂತೆ ನಿಷೇಧಿಸಲಾಗಿದ್ದು, ಮಣ್ಣು ಅಥವಾ ಜೇಡಿಮಣ್ಣಿನ ಮೂರ್ತಿಗಳ ಬಳಕೆಗೆ ಸೂಚಿಸಿದರು. ಗಣೇಶ ಪ್ರತಿಷ್ಠಾಪನೆಗೆ ಗ್ರಾಮ ಪಂಚಾಯಿತಿ, ಪುರಸಭೆ, ಅಥವಾ ಜಾಲಿ ಪಟ್ಟಣ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಸಮಿತಿಗಳು ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಬೇಕು, ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಪ್ರದರ್ಶಿಸಬೇಕು, ಒಣ ಮತ್ತು ಹಸಿ ಕಸ ವಿಲೇವಾರಿಗೆ ವ್ಯವಸ್ಥೆ ಮಾಡಬೇಕು, ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು, ಮತ್ತು ಸ್ವಯಂಸೇವಕರನ್ನು ನೇಮಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಅಥವಾ ಆಕ್ಷೇಪಾರ್ಹ ಹೇಳಿಕೆಗಳಿಗೆ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಲಿದೆ ಎಂದರು.
ತಹಸೀಲ್ದಾರ ನಾಗೇಂದ್ರ ಕೊಳ ಶೆಟ್ಟಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸುನೀಲ ಎಂ., ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ, ಸಿಪಿಐ ದಿವಾಕರ, ಸಿಪಿಐ ಮಂಜುನಾಥ ಲಿಂಗಾರೆಡ್ಡಿ, ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಂಜಪ್ಪ, ಮತ್ತು ತಾಲೂಕಿನ ವಿವಿಧ ಗಣೇಶೋತ್ಸವ ಸಮಿತಿಗಳ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.







