ಭಟ್ಕಳದ ಹಿರೇಬೀಳು ಶ್ರೀ ದುರ್ಗಾ ಡಕ್ಕೆ ಕುಣಿತ ತಂಡ ದುಬೈ ವಿಶ್ವ ಜನಪದ ಉತ್ಸವಕ್ಕೆ ಆಯ್ಕೆ

ಭಟ್ಕಳ: ದುಬೈನಲ್ಲಿ ಸೆ.6 ಮತ್ತು 7ರಂದು ನಡೆಯಲಿರುವ ವಿಶ್ವ ಜನಪದ ಉತ್ಸವಕ್ಕೆ ಭಟ್ಕಳ ತಾಲೂಕಿನ ಹಾಡುವಳ್ಳಿಯ ಹಿರೇಬೀಳು ಶ್ರೀ ದುರ್ಗಾಪರಮೇಶ್ವರಿ ಡಕ್ಕೆ ಕುಣಿತ ಕಲಾ ತಂಡ ಆಯ್ಕೆಯಾಗಿದೆ.
ಕರ್ನಾಟಕ ಜಾನಪದ ಪರಿಷತ್‌ನ ಯು.ಎ.ಇ. (ದುಬೈ) ಘಟಕವು ಈ ಉತ್ಸವವನ್ನು ಆಯೋಜಿಸಿದ್ದು, ಕರ್ನಾಟಕದ ಜನಪದ ಕಲೆಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಉದ್ಘಾಟನೆಯ ಅಂಗವಾಗಿ ಏರ್ಪಡಿಸಲಾಗಿದೆ.
ಈ ಜನಪದ ಉತ್ಸವದಲ್ಲಿ ಕರ್ನಾಟಕದ ಹತ್ತಕ್ಕೂ ಹೆಚ್ಚು ಪ್ರಸಿದ್ಧ ಜನಪದ ಕಲಾ ತಂಡಗಳು ಭಾಗವಹಿಸಿ ಪ್ರದರ್ಶನ ನೀಡಲಿವೆ. ಇವುಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುವಳ್ಳಿಯ ಹಿರೇಬೀಳು ಶ್ರೀ ದುರ್ಗಾ ಪರಮೇಶ್ವರಿ ಡಕ್ಕೆ ಕುಣಿತ ಕಲಾ ತಂಡಕ್ಕೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಅವಕಾಶಕ್ಕಾಗಿ ಶ್ರೀ ದುರ್ಗಾಪರಮೇಶ್ವರಿ ಡಕ್ಕೆ ಕುಣಿತ ಕಲಾ ತಂಡದ ಪ್ರಮುಖ ನಾಗರಾಜ ದುರ್ಗಯ್ಯ ಗೊಂಡ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಜನಪದ ಉತ್ಸವದ ನಿರ್ದೇಶಕರಾದ ಬಾಸುಮ ಕೊಡಗು ಅವರಿಗೆ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಉತ್ಸವವು ಕರ್ನಾಟಕದ ಶ್ರೀಮಂತ ಜನಪದ ಕಲೆಯನ್ನು ವಿಶ್ವ ಮಟ್ಟದಲ್ಲಿ ಪ್ರದರ್ಶಿಸಲು ಒಂದು ವೇದಿಕೆಯಾ ಗಿದ್ದು, ಭಟ್ಕಳದ ಕಲಾ ತಂಡದ ಭಾಗವಹಿಸುವಿಕೆ ಊರಿಗೆ ಹೆಮ್ಮೆಯ ಕ್ಷಣವಾಗಿದೆ.





