ಭಟ್ಕಳದ ಹಳೆ ಮೀನು ಮಾರುಕಟ್ಟೆ ಸ್ಥಳಾಂತರವಿಲ್ಲ; ಹೈಟೆಕ್ ಮಾರುಕಟ್ಟೆಗೆ ಚಿಂತನೆ: ಸಚಿವ ಮಾಂಕಾಳು ವೈದ್ಯ

ಭಟ್ಕಳ: ಭಟ್ಕಳದ ಹಳೆ ಮೀನು ಮಾರುಕಟ್ಟೆಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಲು ಬಿಡುವುದಿಲ್ಲ ಎಂದು ಮೀನುಗಾರಿಕಾ ಸಚಿವ ಮಾಂಕಾಳು ವೈದ್ಯ ಸ್ಪಷ್ಟಪಡಿಸಿದ್ದಾರೆ.
ಮಾರುಕಟ್ಟೆ ಸ್ಥಳಾಂತರದ ಬಗ್ಗೆ ಕಿಡಿಗೇಡಿಗಳು ಮತ್ತು ವಿರೋಧ ಪಕ್ಷದವರು ಹಬ್ಬಿಸುತ್ತಿರುವ ಅಪಪ್ರಚಾರದ ಹಿನ್ನೆಲೆಯಲ್ಲಿ ಶನಿವಾರ ಹಳೆ ಮೀನು ಮಾರುಕಟ್ಟೆಗೆ ಭೇಟಿ ನೀಡಿ, ಮೀನುಗಾರರೊಂದಿಗೆ ಸಂವಾದ ನಡೆಸಿದ ಸಚಿವರು ಸ್ಥಳಾಂತರದ ಯಾವುದೇ ಯೋಜನೆ ಇಲ್ಲ ಎಂದು ದೃಢಪಡಿಸಿದರು.
ಈಗಾಗಲೇ ನಿರ್ಮಾಣಗೊಂಡಿರುವ ಮೀನುಮಾರುಕಟ್ಟೆಯನ್ನು ಮೀನುಗಾರರಿಗೆ ಅನುಕೂಲವಾಗುವಂತೆ ಸೆ,1 ರಿಂದ ಪ್ರಾರಂಭಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ, ರಾಜಕೀಯ ದುರುದ್ದೇಶದಿಂದ ಹಳೆ ಮೀನು ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗುವು ದೆಂಬ ತಪ್ಪು ಮಾಹಿತಿಯಿಂದ ಆತಂಕಗೊಂಡಿದ್ದ ಮೀನುಗಾರ ಮಹಿಳೆಯರು ಮತ್ತು ಮಾರಾಟಗಾರರು ತಹಸೀಲ್ದಾರ್ ಹಾಗೂ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ, ಸಚಿವ ಮಾಂಕಾಳು ವೈದ್ಯ ಅವರು ಇಂದು ಮೀನುಗಾರರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿದರು.
ಮೀನುಗಾರರಿಗೆ ಸಚಿವರಿಂದ ಭರಪೂರ ಭರವಸೆ: ಹಳೆ ಬಸ್ ನಿಲ್ದಾಣದ ಹಳೆ ಮೀನು ಮಾರುಕಟ್ಟೆ ತನ್ನ ಸ್ಥಳದಲ್ಲಿಯೇ ಮುಂದುವರಿಯಲಿದೆ. ನಾನು ಯಾವಾಗಲೂ ಬಡವರ, ಮೀನುಗಾರರ ಪರವಾಗಿದ್ದು ನನ್ನ ಅಧಿಕಾರಾವಧಿಯಲ್ಲಿ ಮೀನುಗಾರರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ.ಮೀನುಗಾರಿಕೆ ವೇಳೆ ಆಕಸ್ಮಿಕವಾಗಿ ಮೃತಪಟ್ಟರೆ, ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡುವ ಯೋಜನೆ ಜಾರಿಯಲ್ಲಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೊಸ ಮೀನು ಮಾರುಕಟ್ಟೆ. ಈಗಾಗಲೇ ನಿರ್ಮಾಣಗೊಂಡಿದ್ದು, ಈ ಮಾರುಕಟ್ಟೆಯನ್ನು ಸೆಪ್ಟೆಂಬರ್ 1 ರಿಂದ ತೆರೆಯುವ ಸಾಧ್ಯತೆ ಇದೆ. ಪ್ರಸ್ತುತ ಮಾರುಕಟ್ಟೆಯನ್ನು ಹೈಟೆಕ್ ಆಗಿ ಮೇಲ್ದರ್ಜೆಗೇರಿಸಲು ಯೋಜನೆ ಇದ್ದು, ಮುನ್ಸಿಪಾಲಿಟಿಯೊಂದಿಗೆ ಸಹಕರಿಸಿ ಗ್ರೌಂಡ್ ಫ್ಲೋರ್ ಅನ್ನು ಮಾರಾಟ ಗಾರರಿಗೆ ಮೀಸಲಿಡಲಾಗುವುದು. ಈ ಕುರಿತು ಎಲ್ಲರ ಒಪ್ಪಿಗೆ ಪಡೆದ ಬಳಿಕವೇ ಕಾರ್ಯಗತಗೊಳಿಸಲಾಗುವುದು ಎಂದು ಸಚಿವರು ಮೀನುಗಾರರಿಗೆ ಭರಪೂರ ಭರವಸೆಯನ್ನು ನೀಡಿದ್ದು, ಮಾರುಕಟ್ಟೆಯ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಚಿವರು ಮನವಿ ಮಾಡಿದರು.
ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದಂತೆ ಮೀನುಗಾರರಿಗೆ ಧೈರ್ಯ ತುಂಬಿದ ಸಚಿವರು, ಯಾವುದೇ ಮೀನುಗಾರರಿಗೆ ಅನ್ಯಾಯವಾಗದಂತೆ ರಕ್ಷಣೆ ನೀಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮೀನು ಮಾರಾಟಗಾರರು, ಸಾರ್ವಜನಿಕರು ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.







