ಮೀನು ಮಾರಾಟಗಾರರ ಭಹಿಷ್ಕಾರದ ನಡುವೆಯೇ ಉದ್ಘಾಟನೆಗೊಂಡ ಹೈಟೆಕ್ ಮೀನು ಮಾರುಕಟ್ಟೆ

ಭಟ್ಕಳ: ಭಟ್ಕಳ ಪುರಸಭೆಯಿಂದ ಆಸ್ಪತ್ರೆ ರಸ್ತೆಯಲ್ಲಿ ನಿರ್ಮಿಸಲಾದ ಹೈಟೆಕ್ ಮೀನು ಮಾರುಕಟ್ಟೆಯನ್ನು ಸೆ. 1 ರಂದು ಔಪಚಾರಿಕವಾಗಿ ಉದ್ಘಾಟಿಸಲಾಯಿತು. ಆದರೆ, ಮೊದಲ ದಿನವೇ ಮೀನು ಖರೀದಿದಾರರು ತೀವ್ರ ನಿರಾಸೆಗೊಳಗಾದರು.
ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾರುಕಟ್ಟೆ ತೆರೆದಿದ್ದರೂ ಒಬ್ಬನಾದರೂ ಮೀನು ಮಾರಾಟಗಾರ ಇಲ್ಲಿ ಕಾಣಿಸಿಕೊಳ್ಳಲಿಲ್ಲ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೆಳಿಗ್ಗೆ ಬೇಗನೆ ದೊಡ್ಡ ಸಂಖ್ಯೆಯ ಜನರು ಶುಚಿಯಾದ ಮತ್ತು ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಮಾರುಕಟ್ಟೆಯಲ್ಲಿ ಮೀನು ಖರೀದಿಸಬಹುದೆಂಬ ಆಶಯದೊಂದಿಗೆ ಆಗಮಿಸಿದ್ದರು. ಆದರೆ, ಮೀನು ಮಾರಾಟಗಾರರು ಸಾಮೂಹಿಕವಾಗಿ ಬಹಿಷ್ಕರಿಸಿದ್ದಾರೆ ಎಂದು ತಿಳಿದಾಗ ಅವರು ನಿರಾಸೆಯಿಂದ ವಾಪಸ್ ಹಿಂದಿರುಗಿದರು.
ಆದಾಗ್ಯೂ, ಮಧ್ಯಾಹ್ನ 12 ಗಂಟೆ ಸುಮಾರಿಗೆ ಒಬ್ಬ ಸ್ಥಳೀಯ ಮೀನು ಮಾರಾಟಗಾರ ಕಿಂಗ್ ಫಿಶ್ ಮತ್ತು ತಾಜಾ ಸೀಗಡಿಗಳೊಂದಿಗೆ ಮಾರುಕಟ್ಟೆಗೆ ಆಗಮಿಸಿದಾಗ, ಸ್ಥಳದಲ್ಲಿದ್ದ ಡಜನ್‌ಗಟ್ಟಲೆ ಖರೀದಿದಾರರು ತಕ್ಷಣವೇ ಮೀನು ಗಳನ್ನು ಖರೀದಿಸಿದರು. ಈ ಸಂದರ್ಭದಲ್ಲಿ ಜನರು ಮೀನು ಮಾರಾಟಗಾರನನ್ನು ಪ್ರೋತ್ಸಾಹಿಸಿದರು.
ಮೀನು ಮಾರಾಟಗಾರರ ಸಹಕಾರದ ಕೊರತೆಯ ಬಗ್ಗೆ ಪುರಸಭೆಯ ಉಸ್ತುವಾರಿ ಅಧ್ಯಕ್ಷ ಅಲ್ತಾಫ್ ಖರೂರಿ ಅವರು, ಹಲವಾರು ಮೀನು ಮಾರಾಟಗಾರರು ತಾವು ಮಾರುಕಟ್ಟೆಗೆ ಬರುವುದಾಗಿ ಭರವಸೆ ನೀಡಿದ್ದರೂ, ನಂತರ ಇತರ ಮಾರಾಟಗಾರರು ಅವರನ್ನು ಇಲ್ಲಿಗೆ ಬರದಂತೆ ತಡೆದಿದ್ದಾರೆ ಎಂದು ತಿಳಿಸಿದರು. ಮೊದಲ ದಿನದ ಪರಿಸ್ಥಿತಿ ನಿರಾಸಾದಾಯಕವಾಗಿದ್ದರೂ, ಜನರ ಸಹಕಾರದಿಂದ ಮುಂಬರುವ ದಿನಗಳಲ್ಲಿ ಮೀನು ಮಾರಾಟಗಾರರ ಸಂಖ್ಯೆ ಯನ್ನು ಹೆಚ್ಚಿಸುವುದು ಖಚಿತ ಎಂದು ಅವರು ಹೇಳಿದರು. ಈ ಸಂಬಂಧ ಪುರಸಭೆಯು ಸಂಪೂರ್ಣ ಪ್ರಯತ್ನ ನಡೆಸು ತ್ತಿದೆ ಎಂದು ತಿಳಿಸಿದ ಅವರು, ಜನರು ನಿರಾಸೆಗೊಳಗಾಗದೆ ಹೊಸ ಮೀನು ಮಾರುಕಟ್ಟೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.







