ಭಟ್ಕಳ| ‘ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್ ಪೈಗಂಬರ್’ ಸೀರತ್ ಅಭಿಯಾನ ಸಮಾರೋಪ

ಭಟ್ಕಳ: ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯು ಆಯೋಜಿಸಿದ್ದ “ನ್ಯಾಯದ ಹರಿಕಾರ – ಪ್ರವಾದಿ ಮಹಮ್ಮದ್ ಪೈಗಂಬರ್ ಸೀರತ್ ಅಭಿಯಾನ” ದ ಸಮಾರೋಪ ಸಮಾರಂಭವು ಶುಕ್ರವಾರ ಆಮೀನಾ ಪ್ಯಾಲೇಸ್ ನಲ್ಲಿ ಜರುಗಿತು. ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ರಾಜ್ಯಮಟ್ಟದ ಉತ್ತಮ ಶಿಕ್ಷಕರ ಸನ್ಮಾನ ಕಾರ್ಯಕ್ರಮವು ಇದರ ವಿಶೇಷ ಆಕರ್ಷಣೆಯಾಗಿತ್ತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಲಯ ಸಂಚಾಲಕ ಸಯೀದ್ ಇಸ್ಮಾಯಿಲ್, ಪ್ರವಾದಿ ಮಹಮ್ಮದ್ ಕೇವಲ ಮುಸ್ಲಿಮರ ಪ್ರವಾದಿಯಲ್ಲ; ಅವರು ಮಾನವಕುಲದ ವಿಶ್ವಗುರು. ಅವರ ಬೋಧನೆ ಗಳು ಮಾನವನ ವೈಯಕ್ತಿಕ ಜೀವನದಿಂದ ಹಿಡಿದು ಸಾಮಾಜಿಕ, ಕೌಟುಂಬಿಕ, ಆರ್ಥಿಕ ಹಾಗೂ ರಾಜಕೀಯ ಬದುಕಿನವರೆಗೂ ಸಮಗ್ರ ಪರಿಹಾರ ನೀಡುತ್ತವೆ. ಇಂದಿನ ಸಮಾಜದಲ್ಲಿ ನಾವು ಎದುರಿಸುತ್ತಿರುವ ಭ್ರಷ್ಟಾಚಾರ, ಅನ್ಯಾಯ, ಹಿಂಸೆ, ಭೇದಭಾವ – ಇವೆಲ್ಲದರಿಗೂ ಪ್ರವಾದಿಯವರ ಮಾರ್ಗದರ್ಶನವೇ ಶಾಶ್ವತ ಪರಿಹಾರ. ಪ್ರಾಚೀನ ಅರೇಬಿಯಾದಲ್ಲಿ ಮದ್ಯಪಾನ, ಜೂಜಾಟ, ವ್ಯಭಿಚಾರ, ಹೆಣ್ಣುಮಕ್ಕಳ ಹತ್ಯೆ ಇವೆಲ್ಲ ಕೆಟ್ಟ ಸಂಪ್ರದಾಯ ಗಳಾಗಿದ್ದವು. ಪ್ರವಾದಿಯವರು ಕೇವಲ ಉಪದೇಶ ಕೊಟ್ಟವರಲ್ಲ, ಬದಲಾಗಿ ಪ್ರಾಯೋಗಿಕವಾಗಿ ಸಮಾಜವನ್ನು ಪರಿವರ್ತಿಸಿದರು. ಗುಲಾಮನಾಗಿದ್ದ ಕರಿಮನುಷ್ಯ ಬಿಲಾಲ್ ಅವರಿಗೆ ಅಪ್ಪಿ ಹಿಡಿದು ಸಮಾನತೆ ಕೊಟ್ಟದ್ದು ನಿಜವಾದ ಕ್ರಾಂತಿ. ಇಂತಹ ಸಂದೇಶಗಳೇ ಇಂದು ಭಾರತಕ್ಕೆ ಅಗತ್ಯ” ಎಂದರು.
ಗೌರವ ಅತಿಥಿಯಾಗಿ ಭಾಗವಹಿಸಿದ ಉ.ಕ. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಶಿವಾನಿ ಶಾಂತರಾಮ್, ಸೀರತ್ ಅಂದರೆ ಕೇವಲ ಬಾಹ್ಯ ಜೀವನವಲ್ಲ, ಅದು ಆಂತರಿಕ ಸೌಂದರ್ಯ. ಯಾವ ಧರ್ಮವಿದ್ದರೂ ಅದು ಮಾನವ ಕಲ್ಯಾಣಕ್ಕಾಗಿ ಇರಬೇಕು. ನಾವು ನಮ್ಮನ್ನು ಮುಸ್ಲಿಂ, ಹಿಂದೂ, ಕ್ರಿಶ್ಚಿಯನ್, ಬೌದ್ಧ ಎಂದು ಗುರುತಿಸಿ ಕೊಂಡರೂ ಕೊನೆಯಲ್ಲಿ ನಾವು ಎಲ್ಲರೂ ಒಂದೇ ಮನುಷ್ಯರು. ಧರ್ಮಾಚರಣೆಯ ಸಮಯದಲ್ಲಿ ಪರಸ್ಪರ ಆಕ್ಷೇಪ ತೋರದೆ, ಗೌರವದಿಂದ ಬದುಕುವುದು ಸಮಾಜದ ಸೌಂದರ್ಯ. ನಮ್ಮ ಬಾಲ್ಯದಲ್ಲಿ ಇದ್ದ ಆ ನಿರ್ಲೋಭ, ನಿರಪೇಕ್ಷ ಬದುಕು – ಅದನ್ನೇ ನಾವು ಪುನಃ ಸಾಧಿಸಬೇಕು ಎಂದು ಕರೆ ನೀಡಿದರು.
ಚಿಂತಕ, ಸಾಹಿತಿ ಅಂಜುಮನ್ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಆರ್.ಎಸ್. ನಾಯಕ ಮಾತನಾಡಿ, ಜಗತ್ತಿನಲ್ಲಿ ಕೆಲವರು ಕೇವಲ ವ್ಯಕ್ತಿಗಳಲ್ಲ; ಅವರು ವ್ಯಕ್ತಿತ್ವಗಳು, ಶಕ್ತಿಗಳು. ಪರಮಹಂಸರು, ಸ್ವಾಮಿ ವಿವೇಕಾ ನಂದರು, ಬಸವಣ್ಣ, ಬುದ್ಧ, ಯೇಸು ಕ್ರಿಸ್ತ – ಇವರ ಸಾಲಿನಲ್ಲಿ ಪ್ರವಾದಿ ಮಹಮ್ಮದ್ ಕೂಡ ಬರುವರು. ಬೆಳಕು ಎಲ್ಲಿಂದ ಬಂದರೂ ಅದನ್ನು ಸ್ವೀಕರಿಸಬೇಕು. ಕೇವಲ ಅವರು ಮುಸ್ಲಿಂ ಸಮಾಜಕ್ಕೆ ಸೇರಿದವರಂತೆ ತಳ್ಳಿಹಾಕು ವುದು ಅಜ್ಞಾನ. ಇಂದಿನ ಜಗತ್ತು ಚಿಕ್ಕದಾಗಿದೆ. ಒಂದು ಧರ್ಮಗ್ರಂಥ ಸಾಕಾಗುವುದಿಲ್ಲ. ನಾವು ವಿವಿಧ ಸಂಸ್ಕೃತಿಗಳ ಸಂದೇಶಗಳನ್ನು ಸ್ವೀಕರಿಸುವ ಹೃದಯದ ವಿಸ್ತಾರವನ್ನು ಹೊಂದಬೇಕು. ಯಾವ ಧರ್ಮ ಮಾನವೀಯ ಮೌಲ್ಯಗಳನ್ನು ಸಾಧಿಸುತ್ತದೆಯೋ, ಅದೇ ನಿಜವಾದ ಧರ್ಮ” ಎಂದು ಅಭಿಪ್ರಾಯಪಟ್ಟರು.
ಭಟ್ಕಳ ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ, ಪ್ರವಾದಿಯವರು ಜಗತ್ತಿಗೆ ಒಗ್ಗಟ್ಟಿನ ಸಂದೇಶ ಕೊಟ್ಟರು. ನಮ್ಮ ದೇಶದಲ್ಲಿ ಅಂಬೇಡ್ಕರ್ ಕೊಟ್ಟಿರುವ ಸಂವಿಧಾನವೇ ನಮ್ಮ ಮಾರ್ಗದರ್ಶಕ. ನಾವು ಹಿಂದೂ-ಮುಸ್ಲಿಂ ಎಂದು ವಿಭಜನೆ ಮಾಡದೆ, ಪ್ರೀತಿಯಿಂದ ಬದುಕಿದಾಗ ಮಾತ್ರ ಅಭಿವೃದ್ಧಿ ಸಾಧ್ಯ, ಸಮಸ್ಯೆಗಳು ಬಂದಾಗ ಪರಸ್ಪರ ದೋಷಾರೋಪಣೆ ಮಾಡದೆ, ಎಲ್ಲರೂ ಕೈ ಜೋಡಿಸಿ ಕೆಲಸ ಮಾಡಬೇಕು. ಒಬ್ಬರನ್ನೊಬ್ಬರು ಕರೆಯುತ್ತಾ, ಜೊತೆಯಾಗಿಯೇ ಸಾಗಬೇಕು. ಇದು ಪ್ರವಾದಿಯವರ ನಿಜವಾದ ಸಂದೇಶ ಎಂದರು.
ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ. ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಸೀರತ್ ಅಭಿಯಾನದ ಸಂಚಾಲಕ ಎಂ.ಆರ್.ಮಾನ್ವಿ ಕಾರ್ಯಕ್ರಮ ನಿರೂಪಿಸಿ ದರು. ಕಾರ್ಯದರ್ಶಿ ಅಬ್ದುಲ್ ರವೂಫ್ ಸವಣೂರ್ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಉ.ಕ.ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಶ್ರೀಧರ್ ಶೇಟ್ ಇವರಿಗೆ ಅಭಿನಂದಿಸಿ ಗೌರವಿಸಲಾಯಿತು.
ವೇದಿಯಲ್ಲಿ ಡಾ.ಸವಿತಾ ಕಾಮತ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್.ನಾಯ್ಕ, ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ರಾಮಾಮೋಗೆರ್, ಕನ್ನಡ ಸಾಹಿತ್ಯಪರಿಷತ್ ಅಧ್ಯಕ್ಷ ಗಂಗಾಧರ್ ನಾಯ್ಕ, ಸದ್ಭಾವನಾ ಮಂಚ್ ಅಧ್ಯಕ್ಷ ಸತೀಶಕುಮಾರ್ ನಾಯ್ಕ ಉಪಸ್ಥಿತರಿದ್ದರು.







