ಹೊಸ ಮೀನು ಮಾರುಕಟ್ಟೆ ಕುರಿತಾಗಿ ಭಟ್ಕಳ ಪುರಸಭೆಯಿಂದ ಸ್ಪಷ್ಟನೆ

ಭಟ್ಕಳ: ಭಟ್ಕಳದ ಹೊಸ ಮೀನು ಮಾರುಕಟ್ಟೆ ಕುರಿತಾಗಿ ಇತ್ತೀಚೆಗೆ ಬಂದ ಸುದ್ದಿಗೆ ಸ್ಪಷ್ಟನೆ ನೀಡಿರುವ ಪುರಸಭೆ ಅಧ್ಯಕ್ಷ ಅಲ್ತಾಫ್ ಖರೋರಿ, ಹಳೆಯ ಮೀನು ಮಾರುಕಟ್ಟೆ ಸ್ಥಳದಲ್ಲಿ ಸಣ್ಣ ಅಂಗಡಿಕಾರರು ಅಥವಾ ಆಟೋ ಚಾಲಕರನ್ನು ತೆರವುಗೊಳಿಸುವ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದ್ದಾರೆ.
ಅವರು ಹೇಳುವ ಪ್ರಕಾರ, ಹಳೆಯ ಮೀನು ಮಾರುಕಟ್ಟೆ ಕಟ್ಟಡವು ಹಾಳಾದ ಸ್ಥಿತಿಯಲ್ಲಿ ಇದ್ದು, ಸಾರ್ವಜನಿಕರ ಸುರಕ್ಷತೆಗಾಗಿ ಹೊಸ ಮಾರುಕಟ್ಟೆ ನಿರ್ಮಿಸಲಾಗಿದೆ. ಕರಾವಳಿ ಪ್ರಾಧಿಕಾರದಿಂದ ರೂ. 1.35 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಈ ಹೊಸ ಮೀನು ಮಾರುಕಟ್ಟೆ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿದ್ದು, 140ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ.
ಹೊಸ ಮಾರುಕಟ್ಟೆಯಲ್ಲಿ ಪಾರ್ಕಿಂಗ್ ಹಾಗೂ ಸ್ವಚ್ಛ ಪರಿಸರದ ಸೌಲಭ್ಯಗಳಿದ್ದು, ಎಲ್ಲ ಜಾತಿ ಧರ್ಮದ ಜನರಿಗೆ ಮೀನು ಮಾರಾಟ ಮತ್ತು ಖರೀದಿಗೆ ಮುಕ್ತವಾಗಿದೆ ಎಂದು ಖರೋರಿ ತಿಳಿಸಿದ್ದಾರೆ.
ಅವರು ಸಾರ್ವಜನಿಕರಿಗೆ ಮನವಿ ಮಾಡುತ್ತಾ, “ತಪ್ಪುಮಾಹಿತಿಗೆ ಕಿವಿಗೊಡದೆ ನಿಜಾಸ್ತಿತ್ವವನ್ನು ಅರಿತು ಸಹಕಾರ ನೀಡಬೇಕು. ಹೊಸ ಮೀನು ಮಾರುಕಟ್ಟೆ ಭಟ್ಕಳ ಜನತೆಗೆ ಸುಸಜ್ಜಿತ, ಸುಂದರ ಮತ್ತು ಸೌಲಭ್ಯಯುತ ವ್ಯಾಪಾರ ಕೇಂದ್ರವಾಗಿದೆ,” ಎಂದು ಹೇಳಿದರು.





