ಭಟ್ಕಳ| ವಾಹನ ನಿಲುಗಡೆ ವಿಚಾರಕ್ಕೆ ಹೊಡೆದಾಟ; ಪ್ರಕರಣ ದಾಖಲು

ಭಟ್ಕಳ: ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹನೀಫಾಬಾದ್ ಪ್ರದೇಶದಲ್ಲಿರುವ ಮದುವೆ ಹಾಲ್ ಎದುರು ವಾಹನ ನಿಲುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಮದುವೆ ರಿಸಪ್ಷನ್ ವೇಳೆ ಎರಡು ಗುಂಪಿನ ನಡುವೆ ನಡೆದ ಹೊಡೆದಾಟದಲ್ಲಿ ಐದಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಮದುವೆ ರಿಸಪ್ಷನ್ ನಡೆಯುತ್ತಿದ್ದ ವೇಳೆ ಪಾರ್ಕಿಂಗ್ ವಿಷಯದಲ್ಲಿ ಆರಂಭವಾದ ಚರ್ಚೆ ಕೆಲವೇ ಕ್ಷಣಗಳಲ್ಲಿ ವಾಗ್ವಾದಕ್ಕೆ ತಿರುಗಿ, ನಂತರ ಪರಸ್ಪರ ಬೈಯ್ದಾಡಿ ಹೊಡೆದಾಟಕ್ಕೂ ತಲುಪಿದೆ. ಈ ವೇಳೆ ಹನೀಫಾಬಾದ್‌ನ ಉಜೇಫ್, ಸೈಯ್ಯದ ಉಮೇರ, ಉಮೇರ ರುಕ್ಕುದ್ದೀನ್, ಮುಗೈರ್ ಎಂ.ಜೆ., ಆಜಾದ್ ನಗರ 6ನೇ ಕ್ರಾಸ್‌ನ ಇಬಾದುಲ್ಲಾ, ದೇವಿನಗರ ಜಾಲಿಯ ಅಬ್ದುಲ್ ರಹೀಮ, ಮೂಸಾನಗರದ ಮುಸ್ತಾಕ್ ಮಕ್ಖುಲ್ ಮತ್ತು ದೇವಿನಗರದ ತಾಹೀರ ಮಹಮ್ಮದ್ ಹುಸೇನ್ ಸೇರಿ ಎಂಟು ಮಂದಿ ಈ ಘಟನೆಯಲ್ಲಿ ಭಾಗಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಭಟ್ಕಳ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ಮಂಜುನಾಥ ಲಿಂಗಾರೆಡ್ಡಿ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಜಗಳದ ವೇಳೆ ಐದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಕೆಲವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





