ಅಂಜುಮನ್ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ನಾಲ್ಕು ದಿನಗಳ ತರಬೇತಿ ಕಾರ್ಯಾಗಾರ

ಭಟ್ಕಳ, ಅ. 18: ಅಂಜುಮನ್ ಹಾಮಿ-ಎ-ಮುಸ್ಲಿಮೀನ್ ಸಂಸ್ಥೆಯ ಅಧೀನದಲ್ಲಿರುವ ಕಾಲೇಜುಗಳು ಮತ್ತು ಶಾಲೆಗಳ ಉಪನ್ಯಾಸಕರು ಹಾಗೂ ಶಿಕ್ಷಕರಿಗಾಗಿ ಆಯೋಜಿಸಲಾದ ನಾಲ್ಕು ದಿನಗಳ ತರಬೇತಿ ಕಾರ್ಯಾಗಾರ ಶನಿವಾರ ಭಟ್ಕಳದ ಅಂಜುಮನ್ ತಾಂತ್ರಿಕ ಮತ್ತು ನಿರ್ವಹಣಾ ಸಂಸ್ಥೆ (AITM) ಯ ಸೆಮಿನಾರ್ ಹಾಲ್‌ನಲ್ಲಿ ಆರಂಭಗೊಂಡಿತು.
ಕಾರ್ಯಕ್ರಮವನ್ನು ಅಂಜುಮನ್ ಉಪಾಧ್ಯಕ್ಷ ಡಾ. ಝುಬೈರ್ ಕೋಲಾ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇಂತಹ ಸಾಮರ್ಥ್ಯವರ್ಧಕ ಕಾರ್ಯಕ್ರಮಗಳು ಶಿಕ್ಷಕರ ವೃತ್ತಿಪರ ಬೆಳವಣಿಗೆಗೆ ಅತ್ಯಂತ ಉಪಯುಕ್ತವೆಂದು ಹೇಳಿದರು.
“ಅಂಜುಮನ್ ಸೆಂಟರ್ ಫಾರ್ ಎಕ್ಸಲೆನ್ಸ್ ಕಳೆದ ಕೆಲವು ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಮುಖ್ಯ ಉದ್ದೇಶ CET, NEET, CA, UPSC ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ, ಸರ್ಕಾರಿ ಉದ್ಯೋಗಗಳಿಗೂ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದಾಗಿದೆ,” ಕೋವಿಡ್ ಸಮಯದಲ್ಲಿ ಚಟುವಟಿಕೆಗಳು ಸ್ಥಗಿತಗೊಂಡಿದ್ದರೂ ಇದೀಗ ಕೇಂದ್ರವು ಸಂಪೂರ್ಣ ಸಕ್ರಿಯಗೊಂಡಿದೆ ಎಂದ ಅವರು, ಭಾಗವಹಿಸಿದವರ ಪ್ರತಿಕ್ರಿಯೆ ಮುಂದಿನ ಕಾರ್ಯಕ್ರಮಗಳ ಯಶಸ್ಸಿಗೆ ಮಾರ್ಗದರ್ಶಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅಂಜುಮನ್ ಉಪಾಧ್ಯಕ್ಷ ಮುಹಮ್ಮದ್ ಸಾದಿಕ್ ಪಿಲ್ಲೂರ್ ಮಾತನಾಡಿ, “ಎಕ್ಸಲೆನ್ಸ್ ಕೇಂದ್ರವು ಅಂಜುಮನ್‌ನ ಪೂರ್ವಾಧ್ಯಕ್ಷ ಅಡ್ವೊಕೇಟ್ ಮುಝಮ್ಮಿಲ್ ಕಾಜಿಯಾ ಅವರ ದೃಷ್ಟಿಯ ಸಾಕಾರವಾಗಿದೆ. ಕೋವಿಡ್ ಸಮಯದಲ್ಲಿ ಯೋಜನೆ ಸಂಪೂರ್ಣವಾಗಿ ಜಾರಿಯಾಗದಿದ್ದರೂ ಈಗ ಅದು ಉತ್ತಮ ರೀತಿಯಲ್ಲಿ ನಡೆಯುತ್ತಿದೆ,” ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸುವುದು ಮತ್ತು ಕೌಶಲಾಭಿವೃದ್ಧಿಗೆ ಪ್ರೋತ್ಸಾಹ ನೀಡುವುದು ಸಂಸ್ಥೆಯ ಮುಖ್ಯ ಗುರಿ ಎಂದು ಅವರು ವಿವರಿಸಿದರು.
ಮಾಜಿ ಅಧ್ಯಕ್ಷ ಅಡ್ವೊಕೇಟ್ ಮುಝಮ್ಮಿಲ್ ಕಾಜಿಯಾ ಮಾತನಾಡಿ, “ಅಂಜುಮನ್‌ನ ಪ್ರಮುಖ ಗುರಿ ವಿದ್ಯಾರ್ಥಿಗಳನ್ನು CET, NEET, CA, UPSC ಮತ್ತು ಸರ್ಕಾರಿ ಸೇವೆಗಳಿಗೆ ತಯಾರಿಸುವುದು. ಈ ನಾಲ್ಕು ದಿನಗಳ ತರಬೇತಿ ಕಾರ್ಯಾಗಾರವು ಶಿಕ್ಷಕರಿಗೆ ಬಹು ಉಪಯುಕ್ತವಾಗಲಿದೆ,” ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಮುಹಮ್ಮದ್ ಅನಸ್, ಅಂಜುಮನ್ ಹೆಚ್ಚುವರಿ ಕಾರ್ಯದರ್ಶಿ ಮುಹಮ್ಮದ್ ಇಸ್ಮಾಯಿಲ್ ಜುಕಾಕು ಸೇರಿದಂತೆ ಹಲವರು ಮಾತನಾಡಿದರು. ತರಬೇತಿ ಸಮಿತಿ ಸಂಚಾಲಕ ಯಾಸೀನ್ ಅಸ್ಕರಿ ಸ್ವಾಗತಿಸಿದರು. ಬಿಬಿಎ ಕಾಲೇಜಿನ ಪ್ರಾಂಶುಪಾಲ ಮುಹಮ್ಮದ್ ಮೊಹ್ಸಿನ್ ನಿರೂಪಿಸಿದರು.
ಈ ನಾಲ್ಕು ದಿನಗಳ ಕಾರ್ಯಾಗಾರ ಅಕ್ಟೋಬರ್ 21ರಂದು ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಳ್ಳಲಿದೆ.







