ನಕಲಿ ಫೇಸ್ಬುಕ್ ಖಾತೆಗಳಿಂದ ನಿಂದನೆ: ಆರೋಪಿ ಪುರಂದರ ಮಂಜುನಾಥ ನಾಯ್ಕ ಬಂಧನ

ಭಟ್ಕಳ : ಬೈಲೂರು ದೊಡ್ಡಬಲಸೆಯ ಪುರಂದರ ಮಂಜುನಾಥ ನಾಯ್ಕ (37) ಎಂಬಾತನನ್ನು ನಕಲಿ ಫೇಸ್ಬುಕ್ ಖಾತೆಗಳ ಮೂಲಕ ಸಚಿವರ ವಿರುದ್ಧ ನಿಂದನೆಗೈದ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿ “ತೇಜು ನಾಯ್ಕ ಹೊನ್ನಾವರ” ಮತ್ತು “ವಂದನಾ ಪೂಜಾರಿ” ಎಂಬ ನಕಲಿ ಫೇಸ್ಬುಕ್ ಖಾತೆಗಳನ್ನು ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ನಿಂದನಾತ್ಮಕ ಪೋಸ್ಟ್‌ಗಳನ್ನು ಹಂಚುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ವೇಳೆ ಜೂನ್ 6ರಂದು ಆರೋಗ್ಯ ಸಚಿವ ಮಂಕಾಳ್ ವೈದ್ಯರ ವಿರುದ್ಧ ಸುಮಾರು 1.29 ನಿಮಿಷಗಳ ನಿಂದನಾತ್ಮಕ ವಿಡಿಯೋ ಹಂಚಲಾಗಿರುವುದು ಪತ್ತೆಯಾಯಿತು. ಈ ಕುರಿತು ನಾಗಪ್ಪ ನಾಯ್ಕ ಎಂಬವರು ಪೊಲೀಸರಿಗೆ ನೀಡಿದ ಮಾಹಿತಿಯ ಆಧಾರದ ಮೇಲೆ, ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ನಡೆದ ಚಟುವಟಿಕೆಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





