ದಾಂಡೇಲಿ ಪ್ರದೇಶದಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

ಕಾರವಾರ: ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಳೆ ದಾಂಡೇಲಿ ಪ್ರದೇಶದಲ್ಲಿ ಮತ್ತೆ ಮೊಸಳೆ ಪ್ರತ್ಯಕ್ಷಗೊಂಡಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕಾಳಿ ನದಿಯ ತೀರದಲ್ಲಿ ಮೊಸಳೆಗಳಿಂದ ರಕ್ಷಣೆಗಾಗಿ ಅರಣ್ಯ ಇಲಾಖೆ ಹಾಗೂ ನಗರಾಡಳಿತ ಅಳವಡಿಸಿದ್ದ ತಂತಿ ಬೇಲಿಯನ್ನು ಲೆಕ್ಕಿಸದೇ, ಬೃಹತ್ ಗಾತ್ರದ ಮೊಸಳೆ ದಾಟಿ ಬಟ್ಟೆ ಒಗೆಯುವ ಸ್ಥಳದವರೆಗೆ ಬಂದು ಕೆಲ ಹೊತ್ತು ವಿಶ್ರಾಂತಿ ಪಡೆದಿದೆ. ನಂತರ ಅದು ನಿಧಾನವಾಗಿ ನದಿಯತ್ತ ಹಿಂದಿರುಗಿದೆ ಎಂದು ತಿಳಿದುಬಂದಿದೆ.
ಘಟನೆಯ ದೃಶ್ಯವನ್ನು ಹಳೆ ದಾಂಡೇಲಿಯ ನಿವಾಸಿಯೊಬ್ಬರು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮೊಸಳೆ ಬೇಲಿ ದಾಟಿ ನದಿ ದಡದಲ್ಲಿ ಆರಾಮವಾಗಿ ಮಲಗಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಕಾಳಿ ನದಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮೊಸಳೆಗಳ ಚಟುವಟಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯವರು ಈ ಘಟನೆಯ ಕುರಿತು ಮಾಹಿತಿ ಪಡೆದು, ಮುಂದಿನ ದಿನಗಳಲ್ಲಿ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.





