ಭಟ್ಕಳ: ಅಂಜುಮನ್ ಕಾಲೇಜಿನಲ್ಲಿ ಸೈಬರ್ ಕ್ರೈಂ ಹಾಗೂ ಮಾದಕದ್ರವ್ಯ ಜಾಗೃತಿ ಕಾರ್ಯಕ್ರಮ

ಭಟ್ಕಳ: ಅಂಜುಮನ್ ಡಿಗ್ರಿ ಕಾಲೇಜು ಮತ್ತು ಪಿಜಿ ಸೆಂಟರ್ ನಲ್ಲಿ ಬುಧವಾರ ಸೈಬರ್ ಕ್ರೈಂ ಹಾಗೂ ಮಾದಕದ್ರವ್ಯ ಜಾಗೃತಿ ಕಾರ್ಯಕ್ರಮ ನಡೆಯಿತು.
ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ “Stay Smart, Stay Safe Online” ಹಾಗೂ “Say No to Drugs, Say Yes to Life” ಎಂಬ ವಿಷಯಗಳಡಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮವನ್ನು ಮಜ್ಲಿಸ್-ಎ-ಇಸ್ಲಾಹ್ ವ ತಂಝೀಮ್, ಅಂಜುಮನ್ ಹಾಮಿ-ಎ-ಮುಸ್ಲಿಮೀನ್, ಇಸ್ಲಾಹಿ ಮುಅಶ್ರಾ ಸಮಿತಿ, ಭಟ್ಕಳ ಮುಸ್ಲಿಂ ಯುತ್ ಫೆಡರೇಶನ್, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಭಟ್ಕಳ ನಗರ ಠಾಣೆ ಪೊಲೀಸ್ ಹಾಗೂ ಅಂಜುಮನ್ ಎನ್‌ಎಸ್‌ಎಸ್ ಘಟಕ ಸಂಯುಕ್ತವಾಗಿ ಆಯೋಜಿಸಿತ್ತು.
ಮುಖ್ಯ ಅತಿಥಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಅವರು ಸೈಬರ್ ಅಪರಾಧ, ಮಾದಕದ್ರವ್ಯ ದುರೋಪಯೋಗ ಹಾಗೂ ಜವಾಬ್ದಾರಿಯುತ ನಾಗರಿಕತೆಯ ಕುರಿತು, ಇತ್ತೀಚೆಗೆ ಹೆಚ್ಚುತ್ತಿರುವ ಆನ್‌ಲೈನ್ ವಂಚನೆಗಳ ಬಗ್ಗೆ ಎಚ್ಚರಿಕೆ ಇಂದ ಇರುವಂತೆ ಕರೆ ನೀಡಿದರು. ನಾಗರಿಕರು ಇಂತಹ ಘಟನೆಗಳು ಸಂಭವಿಸಿದಾಗ ತಕ್ಷಣವೇ ಟೋಲ್ ಫ್ರೀ ಸಂಖ್ಯೆ 1930 ಗೆ ಕರೆ ಮಾಡಿ ದೂರು ನೀಡಬೇಕೆಂದು ಮನವಿ ಮಾಡಿದರು.
“ಮಾದಕದ್ರವ್ಯಗಳಿಂದ ದೂರವಿದ್ದು, ಕನಸುಗಳು ಮತ್ತು ಗುರಿಗಳನ್ನು ರೂಪಿಸಿಕೊಳ್ಳಿ ಎಂದು ಅವರು ವಿದ್ಯಾರ್ಥಿ ಗಳಿಗೆ ಸಂದೇಶ ನೀಡಿದರು. ಯುವಕರಲ್ಲಿ ಅರಿವು ಮೂಡಿಸಲು ಇಂತಹ ಜಾಗೃತಿ ಕಾರ್ಯಕ್ರಮಗಳು ಅತ್ಯಂತ ಅಗತ್ಯವೆಂದು ಅವರು ಶ್ಲಾಘಿಸಿದರು.
ಕಾರ್ಯಕ್ರಮವು ಮಾಸ್ಟರ್ ಅಬ್ದುರ್ ರಹ್ಮಾನ್ ಅವರ ಕುರಾನ್ ಪಠಣದಿಂದ ಪ್ರಾರಂಭವಾಯಿತು. ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಮುಬಶ್ಶಿರ್ ಹಲ್ಲಾರೆ ಸ್ವಾಗತ ಭಾಷಣ ಮಾಡಿದರು. ಅಡ್ವೊಕೇಟ್ ಸಯ್ಯದ ಇಮ್ರಾನ್ ಲಂಕಾ, ಉಪಾಧ್ಯಕ್ಷರು, ಜಾಲಿ ಟೌನ್ ಪಂಚಾಯತ್, ಅತಿಥಿಗಳನ್ನು ಪರಿಚಯಿಸಿರು.
ಉಪ ಕಾಜಿ ಮೌಲಾನಾ ಮುಹಮ್ಮದ್ ಅನ್ಸಾರ್ ಮದನಿ ಅವರು, ಯುವಕರು ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಕಾಪಾಡಿ, ಮಾದಕದ್ರವ್ಯಗಳಿಂದ ದೂರವಿರಬೇಕೆಂದು ಸಲಹೆ ನೀಡಿದರು.
ಅಂಜುಮನ್ ಹಾಮಿ-ಎ-ಮುಸ್ಲಿಮೀನ್‌ನ ಉಪಾಧ್ಯಕ್ಷ ಮುಹಮ್ಮದ್ ಸಾದಿಕ್ ಪಿಲ್ಲೂರು ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಯೂಸುಫ್ ಕೋಲಾ ಧನ್ಯವಾದ ಅರ್ಪಿಸಿದರು.
ಈ ಸಂದರ್ಭ ಡಾ. ಮುಹಮ್ಮದ್ ಜುಬೈರ್ ಕೋಲಾ, ಜುಕಾಕು ಇಸ್ಮಾಯಿಲ್, ಸಿ. ಪಿ. ಐ.ದಿವಾಕರ್, ಪಿಎಸ್‌ಐ ನವೀನ್, ಪಿಎಸ್‌ಐ ಮಂಜುನಾಥ್, ಅಜೀಜುರ್ ರಹ್ಮಾನ್, ಫಯ್ಯಾಝ್ ಕೋಲಾ ಮತ್ತು ದಾಮೋದರ್ ನಾಯಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರೊ. ಗಾನಿಮ್ ಮೊಹ್ತಶಮ್ ನಿರ್ವಹಿಸಿದರು.







