ಭಟ್ಕಳದಲ್ಲಿ ಧಾರ್ಮಿಕ ಧ್ವಜ ತೆರವು: ಕೆಲಕಾಲ ಉದ್ವಿಗ್ನತೆ

ಭಟ್ಕಳ: ಈದುಲ್ ಫಿತ್ರ್ ಅಂಗವಾಗಿ ಬಂದರ್ ರಸ್ತೆಯ ಈದ್ಗಾ ಮೈದಾನದ ಎದುರು ಅಳವಡಿಸಲಾಗಿದ್ದ ಧ್ವಜವನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಧ್ವಜ ತೆರವುಗೊಳಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದಾಗಿ ಅವರು ದೂರಿದರು. ಇದರಿಂದ ಬಂದರ್ ರಸ್ತೆ ಭಾಗದಲ್ಲಿ ಸಂಚಾರ ವ್ಯತ್ಯಯ ಉಂಟಾಗಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ವಿಷಯ ತಿಳಿದ ತಕ್ಷಣ ಡಿವೈಎಸ್ಪಿ ಗಿರೀಶ್ ಬಿ., ಸಿಪಿಐ ದಿವಾಕರ್ ಪಿ.ಎಂ., ಪಿಎಸ್‌ಐ ನವೀನ್ ನಾಯಕ್ ಹಾಗೂ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ವೆಂಕಟೇಶ್ ಮುರ್ನಾಳ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಮುಂದಾದರು. ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ಶಮನಗೊಳಿಸಿದರು.
ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಮುಂದುವರಿಸಲಾಗಿದೆ. ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಮತ್ತು ಶಾಂತಿ–ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆ ಹಾಗೂ ಆಡಳಿತವು ಸಾರ್ವಜನಿಕರಿಗೆ ಮನವಿ ಮಾಡಿದೆ.
ಧ್ವಜ ತೆರವು ವಿವಾದ ಕುರಿತು ತಂಝೀಮ್ ಮುಖಂಡ ಮೌಲಾನ ಅಝೀಝುರ್ರಹ್ಮಾನ್ ರುಕ್ನುದ್ದಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಭಾರತದಲ್ಲಿ ಎಲ್ಲರಿಗೂ ಒಂದೇ ಕಾನೂನು ಅನ್ವಯಿಸಬೇಕು. ಹಿಂದೂಗಳಿಗೆ ಬೇರೆ, ಮುಸ್ಲಿಮರಿಗೆ ಬೇರೆ ಕಾನೂನು ಎಂಬುದಿಲ್ಲ. ನಗರದಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ ಕೇಸರಿ ಧ್ವಜಗಳು ಹಲವೆಡೆ ಸರ್ಕಾರಿ ಜಾಗಗಳಲ್ಲಿ ಹಾರಾಡುತ್ತಿವೆ. ಮೊದಲು ಅವುಗಳನ್ನು ತೆರವುಗೊಳಿಸಬೇಕು” ಎಂದು ಅವರು ತಿಳಿಸಿದ್ದಾರೆ.
“ಈದ್ ಸಂದರ್ಭ ಅಳವಡಿಸಲಾದ ಧಾರ್ಮಿಕ ಧ್ವಜವನ್ನು ಮಾತ್ರ ಗುರಿಯಾಗಿಸಿಕೊಂಡು ತೆರವುಗೊಳಿಸಿರುವುದು ಸಮುದಾಯದ ಯುವಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಎಲ್ಲರಿಗೂ ಒಂದೇ ರೀತಿಯ ನಿಯಮ ಅನ್ವಯವಾ ಗಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.







