ಧರ್ಮಾಚರಣೆಯಿಂದಲೇ ಜೀವನಕ್ಕೆ ಸಾರ್ಥಕತೆ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಭಟ್ಕಳ: ಮಾನವನು ಸುಖ ಹಾಗೂ ಶಾಂತಿಯಿಂದ ಜೀವನ ಸಾಗಿಸಬೇಕಾದರೆ ಧರ್ಮವನ್ನು ಆಚರಿಸಬೇಕು. ಭಕ್ತಿ, ಶ್ರದ್ಧೆ ಮತ್ತು ಗುರುಭಕ್ತಿಯ ಮೂಲಕವೇ ಜೀವನಕ್ಕೆ ಸಾರ್ಥಕತೆ ದೊರೆಯುತ್ತದೆ ಎಂದು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಸೋಡಿಗದ್ದೆಯ ಶ್ರೀ ಮಹಾಸತಿ ದೇವಸ್ಥಾನ ಅಭಿವೃದ್ಧಿ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ನೂತನ ಶಿಲಾಮಯ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಈ ಭಾಗದ ಮೀನುಗಾರರು ಮತ್ತು ನಾಮಧಾರಿ ಸಮುದಾಯದವರು ಉತ್ತಮ ಬಾಂಧವ್ಯ ಹೊಂದಿದ್ದು, ಧರ್ಮ ಮತ್ತು ಆಚಾರವನ್ನು ಅರಿತು ಬದುಕುವವನು ಮೋಕ್ಷದ ಮಾರ್ಗ ಕಂಡುಕೊಳ್ಳುತ್ತಾನೆ ಎಂದು ಹೇಳಿದರು. ದೇವಸ್ಥಾನಕ್ಕೆ ತೆರಳುವುದರಿಂದ ಮಾತ್ರ ದೇವರ ಆಶೀರ್ವಾದ ದೊರೆಯುವುದಿಲ್ಲ. ಗುರುದಾಸನಾದಾಗ ಮಾತ್ರ ದೈವಕೃಪೆ ಲಭಿಸುತ್ತದೆ. ಗುರು ಮತ್ತು ಶಿಷ್ಯರ ಸಂಬಂಧ ಪ್ರಶ್ನಾತೀತವಾದದ್ದು ಎಂದರು.
ಮಹಾಸತಿ ದೇವಿಯ ಮೇಲಿನ ಭಕ್ತಿ ನೆರಳಿನಂತೆ ಭಕ್ತರನ್ನು ಕಾಪಾಡುತ್ತದೆ. ಬ್ರಹ್ಮಾಂಡದ ಸೃಷ್ಟಿಯೇ ಒಂದು ದಿವ್ಯ ಬೆಳಕು. ಪರಬ್ರಹ್ಮನ ಕೃಪೆಯಿಂದ ಆತ್ಮೋದ್ದಾರ ಸಾಧ್ಯವಾಗುತ್ತದೆ. ದೇಹದಲ್ಲಿ ಶಕ್ತಿ, ಮನಸ್ಸಿನಲ್ಲಿ ಭಕ್ತಿ ಹಾಗೂ ಶ್ರದ್ಧೆ ಇರುವಾಗಲೇ ಸತ್ಕಾರ್ಯಗಳನ್ನು ಮಾಡಬೇಕು. ಅದು ಮುಂದಿನ ಜೀವನಕ್ಕೆ ಠೇವಣಿಯಾಗುತ್ತದೆ ಎಂದು ಹೇಳಿದರು.
ಅಧಿಕಾರ ಮತ್ತು ಸಂಪತ್ತನ್ನು ಸದ್ಬಳಕೆ ಮಾಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಗುರುವಿನ ಆಶೀರ್ವಾದ ಹೆಚ್ಚಾದಂತೆ ದೈವಬಲವೂ ವೃದ್ಧಿಯಾಗುತ್ತದೆ. ಅದನ್ನು ಭಯದಿಂದಲೋ ಅಥವಾ ಹಣದಿಂದಲೋ ಪಡೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮ ಆತ್ಮೋದ್ದಾರವನ್ನು ತಾವೇ ಮಾಡಿಕೊಂಡು ‘ವಸುದೈವ ಕುಟುಂಬಕಂ’ ಎಂಬ ಭಾವನೆಯೊಂದಿಗೆ ಬದುಕಬೇಕು ಎಂದು ಸ್ವಾಮೀಜಿ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಸಚಿವ ಮಂಕಾಳ ಎಸ್. ವೈದ್ಯ ಮಾತನಾಡಿ, ಧಾರ್ಮಿಕ ಕ್ಷೇತ್ರಗಳು, ಶಿಕ್ಷಣ ಸಂಸ್ಥೆಗಳು ಮತ್ತು ಮಠಗಳಲ್ಲಿ ಕೊರತೆ ಉಂಟಾದರೆ ಅದು ಸಮಾಜ, ರಾಜ್ಯ ಹಾಗೂ ದೇಶದ ಮೇಲೆಯೇ ಪರಿಣಾಮ ಬೀರುತ್ತದೆ ಎಂದರು. ಹಲವು ವರ್ಷಗಳ ಕನಸಾಗಿದ್ದ ದೇವಸ್ಥಾನದ ನಿರ್ಮಾಣ ಕಾರ್ಯ ಆರಂಭವಾಗಿರುವುದು ಸಂತಸ ತಂದಿದೆ. ಸೋಡಿಗದ್ದೆ ಮಹಾಸತಿ ಅಮ್ಮನ ಕುರಿತ ಸ್ಥಳೀಯರ ಭಕ್ತಿ ಮತ್ತು ಶ್ರದ್ಧೆ ಮನಸ್ಸಿಗೆ ತಟ್ಟಿದೆ. ದೇವಸ್ಥಾನ ನಿರ್ಮಾಣಕ್ಕೆ ಸರ್ಕಾರ ಮತ್ತು ಅಧಿಕಾರಿಗಳ ಸಂಪೂರ್ಣ ಸಹಕಾರ ದೊರೆಯಲಿದೆ ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ದೇವಸ್ಥಾನದ ಅಭಿವೃದ್ಧಿಗೆ ಅಗತ್ಯವಿರುವ ಪ್ರಕ್ರಿಯೆಗಳು ಹಾಗೂ ಹಂತ ಹಂತದ ಕಾಮಗಾರಿಗಳನ್ನು ಜವಾಬ್ದಾರಿಯಿಂದ ಕೈಗೊಳ್ಳಲಾಗುವುದು. ಸಾರ್ವಜನಿಕರ ಹಣ ಸದ್ಬಳಕೆಯಾಗುವಂತೆ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲಾಗುವುದು ಎಂದರು.
ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಜೆ.ಡಿ. ನಾಯ್ಕ ಹಾಗೂ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವಿದಾಸ ಮೊಗೇರ ಮಾತನಾಡಿದರು.
ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಭಟ್ಕಳ ಉಪವಿಭಾಗಾಧಿಕಾರಿ ಮಹೇಶ್ ಜೆ., ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಸುಧಾ ತಳವಾರ, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ನಾಗರಾಜ ನಾಯ್ಕ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಅಚ್ಯುತ ಎಂ. ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಸದಸ್ಯ ಮಾಸ್ತಿ ಜೆ. ನಾಯ್ಕ ಸ್ವಾಗತಿಸಿದರು. ದೇವಾನಂದ ಮೊಗೇರ ಹಾಗೂ ಭಾಸ್ಕರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ದೇವಯ್ಯ ನಾಯ್ಕ ಪ್ರಾರ್ಥಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗರಾಜ ಇ.ಎಚ್. ವಂದಿಸಿದರು.






