ಭಟ್ಕಳ | ʼಮುರಿನಕಟ್ಟೆʼ ಬಗ್ಗೆ ಸುಳ್ಳು ಸುದ್ದಿ ನಂಬದಂತೆ ಜಿಲ್ಲಾಡಳಿತ ಮನವಿ

ಕಾರವಾರ: ಭಟ್ಕಳ ನಗರದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ–66ರ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಮ್ಮನವರ ಹೊರೆ ಇಡುವ ‘ಮುರುವಿನಕಟ್ಟೆ’ಯನ್ನು ಎನ್‌ಎಚ್‌ಎಐ ವತಿಯಿಂದ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗುತ್ತಿತ್ತು. ಆದರೆ ಮೇ 24ರಂದು ಕೆಂಪುಕಲ್ಲಿನಿಂದ ನಿರ್ಮಿಸಲಾಗುತ್ತಿದ್ದ ಪರ್ಯಾಯ ಸಂರಚನೆಯನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಪ್ರಕಟಣೆ ಹೊರಡಿಸಿ, “ಸಾಂಪ್ರದಾಯಿಕವಾಗಿ ಅಮ್ಮನವರ ಹೊರೆ ಇಡಲಾಗು ತ್ತಿರುವ ಮೂಲ ಮುರುವಿನಕಟ್ಟೆ ಯಥಾಸ್ಥಿತಿಯಲ್ಲೇ ಸುರಕ್ಷಿತವಾಗಿದ್ದು, ಅದಕ್ಕೆ ಯಾವುದೇ ಧಕ್ಕೆಯಾಗಿಲ್ಲ” ಎಂದು ತಿಳಿಸಿದ್ದಾರೆ.
ಆದರೆ ಕೆಲವು ಸಮಾಜಘಾತುಕ ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಹಾಗೂ ಸುಳ್ಳು ಮಾಹಿತಿಯನ್ನು ಹರಿಬಿಟ್ಟು, ಮೂಲ ಮುರುವಿನಕಟ್ಟೆಗೆ ಹಾನಿಯಾಗಿದೆ ಎಂಬ ರೀತಿಯಲ್ಲಿ ವದಂತಿ ಹಬ್ಬಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು. ಸಾಂಪ್ರದಾಯಿಕವಾಗಿ ಅಮ್ಮನವರ ಹೊರೆ ಇಡಲಾಗುತ್ತಿರುವ ಮೂಲ ಸ್ಥಳ ಯಥಾಸ್ಥಿತಿಯಲ್ಲೇ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿಗಳು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹಾಗೂ ಸುಳ್ಳು ಮಾಹಿತಿಯನ್ನು ಪೋಸ್ಟ್ ಮಾಡುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.






