ಭಟ್ಕಳದಲ್ಲಿ ಡಾಗ್ ಸ್ಕ್ವಾಡ್ ಕಾರ್ಯಾಚರಣೆ: ಕೊರಿಯರ್, ಅಂಚೆ ಕಚೇರಿಗಳಲ್ಲಿ ಮಾದಕ ವಸ್ತುಗಳ ಶೋಧ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕಾರವಾರದಿಂದ ಆಗಮಿಸಿದ್ದ ಪೊಲೀಸ್ ಇಲಾಖೆಯ ಮಾದಕ ವಸ್ತು ಪತ್ತೆಹಚ್ಚುವ ಡಾಗ್ ಸ್ಕ್ವಾಡ್ ತಂಡವು ಬುಧವಾರ ಭಟ್ಕಳದ ವಿವಿಧ ಕೊರಿಯರ್ ಸೇವಾ ಕೇಂದ್ರಗಳು ಹಾಗೂ ಅಂಚೆ ಕಚೇರಿಗಳಲ್ಲಿ ತಪಾಸಣೆ ನಡೆಸಿತು.
ವಿಶೇಷ ತರಬೇತಿ ಪಡೆದ ಶ್ವಾನಗಳನ್ನು ಒಳಗೊಂಡಿದ್ದ ತಂಡವು ಕೊರಿಯರ್ ಕಚೇರಿಗಳಲ್ಲಿದ್ದ ಪಾರ್ಸೆಲ್‌ಗಳು, ಬಂಡಲ್‌ಗಳು ಹಾಗೂ ಇತರೆ ಸಾಮಗ್ರಿಗಳನ್ನು ಪರಿಶೀಲಿಸಿತು. ಅಲ್ಲದೆ ಕಚೇರಿಯ ವಿವಿಧ ವಿಭಾಗಗಳಲ್ಲಿಯೂ ಶ್ವಾನಗಳ ನೆರವಿನಿಂದ ತಪಾಸಣೆ ನಡೆಸಿ ಯಾವುದೇ ಅನುಮಾನಾಸ್ಪದ ವಸ್ತುಗಳಿರುವುದೇ ಎಂಬುದನ್ನು ಪರಿಶೀಲಿಸಲಾಯಿತು.
ತಪಾಸಣೆ ಬಳಿಕ ಡಾಗ್ ಸ್ಕ್ವಾಡ್ ಅಧಿಕಾರಿಗಳು ಕೊರಿಯರ್ ಮತ್ತು ಅಂಚೆ ಕಚೇರಿ ಸಿಬ್ಬಂದಿಗೆ, ಯಾವುದೇ ಪಾರ್ಸೆಲ್ ಅಥವಾ ಸಾಮಗ್ರಿಯ ಬಗ್ಗೆ ಅನುಮಾನ ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಅಕ್ರಮ ಮಾರಾಟದ ಚಟುವಟಿಕೆ ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅವುಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿ ಸಿದ್ದು, ಮುಂದಿನ ದಿನಗಳಲ್ಲಿಯೂ ಇಂತಹ ತಪಾಸಣೆ ಮತ್ತು ನಿಗಾ ಕಾರ್ಯಾಚರಣೆಗಳನ್ನು ಮುಂದುವರಿಸಲಾ ಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.






