ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಭಟ್ಕಳದಲ್ಲಿ ಮನೆ ಮನೆಗೆ ಅಧಿಕಾರಿಗಳ ಭೇಟಿ

ಭಟ್ಕಳ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 79-ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ 2026ನೇ ಸಾಲಿನ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ಬೂತ್ ಮಟ್ಟದ ಅಧಿಕಾರಿ ಗಳು (ಬಿಎಲ್‌ಒ) ಕ್ಷೇತ್ರ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಣೆ ನಡೆಸುತ್ತಿದ್ದಾರೆ ಎಂದು ಮತದಾರರ ನೋಂದಣಾಧಿಕಾರಿ ಹಾಗೂ ಭಟ್ಕಳ ಉಪವಿಭಾಗಾಧಿಕಾರಿಗಳ ಕಚೇರಿ ತಿಳಿಸಿದೆ.
ಜುಲೈ 29ರ ವರೆಗೆ ಅಭಿಯಾನ: ಈ ವಿಶೇಷ ಆಂದೋಲನವು ಜೂನ್ 30 ರಿಂದ ಜುಲೈ 29ರ ವರೆಗೆ ನಡೆಯ ಲಿದ್ದು, ನಿಯೋಜಿತ ಅಧಿಕಾರಿಗಳು ಸಾರ್ವಜನಿಕರ ಮನೆಗಳಿಗೆ ತೆರಳಿ ಎನ್ಯೂಮರೇಶನ್ ಫಾರ್ಮ್‌ಗಳನ್ನು (Enumeration Forms) ವಿತರಿಸುತ್ತಿದ್ದಾರೆ. ಜೂನ್ 16ರ ವರೆಗಿನ ಅಂಕಿಅಂಶಗಳ ಪ್ರಕಾರ ಕ್ಷೇತ್ರದಲ್ಲಿ ಒಟ್ಟು 2,31,778 ಮತದಾರರಿದ್ದು, ಈ ಪೈಕಿ ಈಗಾಗಲೇ 2,20,256 (ಶೇ. 95.03) ಮತದಾರರ ಮ್ಯಾಪಿಂಗ್ ಕಾರ್ಯ ಮುಕ್ತಾಯಗೊಂಡಿದೆ.
ಪರಿಷ್ಕರಣೆ ಪ್ರಗತಿ ವಿವರ (ಜುಲೈ 2ರ ವರೆಗೆ): ಹೊನ್ನಾವರ ವ್ಯಾಪ್ತಿ (ಮತಗಟ್ಟೆ 1 ರಿಂದ 108): ಒಟ್ಟು 34,132 ಫಾರ್ಮ್‌ಗಳನ್ನು ವಿತರಿಸಲಾಗಿದ್ದು, 1,231 ಫಾರ್ಮ್‌ಗಳ ಗಣಕೀಕರಣ (ಡಿಜಿಟಲೀಕರಣ) ಪೂರ್ಣಗೊಂಡಿದೆ. ಭಟ್ಕಳ ವ್ಯಾಪ್ತಿ (ಮತಗಟ್ಟೆ 109 ರಿಂದ 252): ಒಟ್ಟು 36,622 ಫಾರ್ಮ್‌ಗಳನ್ನು ಹಂಚಲಾಗಿದ್ದು, 193 ಫಾರ್ಮ್‌ಗಳ ಗಣಕೀಕರಣ ಪ್ರಕ್ರಿಯೆ ಮುಗಿದಿದೆ.
ದೋಷಮುಕ್ತ ಪಟ್ಟಿಗೆ ಆದ್ಯತೆ: ಮತದಾರರ ಪಟ್ಟಿಯನ್ನು ಸಂಪೂರ್ಣ ದೋಷಮುಕ್ತಗೊಳಿಸುವ ಉದ್ದೇಶದಿಂದ ಈ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದ್ದು, ವಲಸೆ ಹೋದವರು, ಮರಣ ಹೊಂದಿದವರು ಹಾಗೂ ದ್ವಿಪ್ರತಿ (Duplicate) ಮತದಾರರನ್ನು ಗುರುತಿಸಲಾಗುತ್ತಿದೆ. ಈವರೆಗೆ ನಡೆಸಿದ ಪರಿಶೀಲನೆಯಲ್ಲಿ 30 ಮರಣ ಪ್ರಕರಣಗಳು, 2 ದ್ವಿಪ್ರತಿ ಪ್ರಕರಣಗಳು ಹಾಗೂ 11 ಕಾಯಂ ವಲಸೆ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಹಕಾರಕ್ಕೆ ಮನವಿ: ಚುನಾವಣಾ ಆಯೋಗದ ಈ ಮಹತ್ವದ ಕಾರ್ಯಕ್ಕೆ ಸಾರ್ವಜನಿಕರು ಪೂರ್ಣ ಪ್ರಮಾಣದಲ್ಲಿ ಸಹಕರಿಸಬೇಕು. ಬೂತ್ ಮಟ್ಟದ ಅಧಿಕಾರಿಗಳು ಮನೆಗೆ ಬಂದಾಗ ಸಾರ್ವಜನಿಕರು ತಮ್ಮ ಕುಟುಂಬದ ನಿಖರ ಮಾಹಿತಿ ನೀಡಿ, ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳಲು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬೇಕು ಎಂದು ಮತದಾರರ ನೋಂದಣಾಧಿಕಾರಿಗಳು ಪ್ರಕಟಣೆಯ ಮೂಲಕ ಕೋರಿದ್ದಾರೆ.






