ಭಟ್ಕಳ| ಸೂಸಗಡಿಯಲ್ಲಿ ದಲಿತ ಕುಟುಂಬಗಳ ತೆರವಿಗೆ ಆಕ್ಷೇಪ; ಪರಿಹಾರ, ಪುನರ್ವಸತಿಗೆ ಆಗ್ರಹ

ಭಟ್ಕಳ: ಭಟ್ಕಳ ತಾಲ್ಲೂಕಿನ ಸೂಸಗಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ–66ರ ಪಕ್ಕದಲ್ಲಿರುವ ಕೊರಗರ್ ಕೇರಿಯಲ್ಲಿ ಕಳೆದ 50ರಿಂದ 60 ವರ್ಷಗಳಿಂದ ವಾಸಿಸುತ್ತಿರುವ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟು ಸಮು ದಾಯದ ಏಳು ಕುಟುಂಬಗಳನ್ನು ಯಾವುದೇ ಕಾನೂನುಬದ್ಧ ನೋಟಿಸ್ ನೀಡದೆ ತೆರವುಗೊಳಿಸಲು ನಡೆಸುತ್ತಿರುವ ಪ್ರಯತ್ನವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಉಪವಿಭಾಗಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ, ಸ್ವಾತಂತ್ರ್ಯ ಪೂರ್ವದಿಂದಲೂ ಸರ್ಕಾರಿ ಕ್ವಾಟ್ರರ್ಸ್ ಗಳಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನು ಏಕಾಏಕಿ ಒಕ್ಕಲೆಬ್ಬಿಸುವ ಕ್ರಮವು ಭಾರತ ಸಂವಿಧಾನದ ಅನುಚ್ಛೇದ 21 ಮತ್ತು 300ಎಗೆ ವಿರುದ್ಧವಾಗಿದ್ದು, ಕಾನೂನುಬಾಹಿರವಾಗಿದೆ ಎಂದು ಸಮಿತಿ ಆರೋಪಿಸಿದೆ.
ರಾಷ್ಟ್ರೀಯ ಹೆದ್ದಾರಿ–66 ಅಗಲೀಕರಣಕ್ಕಾಗಿ ನಡೆದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಆಸ್ತಿಯ ಮಾಲೀಕತ್ವವನ್ನು ಭಟ್ಕಳ ಪುರಸಭೆಯ ಹೆಸರಿನಲ್ಲಿ ಪರಿಗಣಿಸಿ, ಸುಮಾರು ₹80 ಲಕ್ಷ ಪರಿಹಾರವನ್ನು ಪುರಸಭೆಗೆ ಪಾವತಿಸಲಾಗಿದೆ. ಆದರೆ ಹಲವು ದಶಕಗಳಿಂದ ಅಲ್ಲಿ ವಾಸಿಸುತ್ತಿರುವ ಏಳು ಕುಟುಂಬಗಳಿಗೆ ಯಾವುದೇ ನೋಟಿಸ್ ನೀಡದೆ, ಅವರ ಅಭಿಪ್ರಾಯವನ್ನು ಕೇಳದೆ ಹಾಗೂ ಪರಿಹಾರ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಭೂಸ್ವಾಧೀನ, ನ್ಯಾಯಯುತ ಪರಿಹಾರ, ಪಾರದರ್ಶಕತೆ, ಪುನರ್ವಸತಿ ಮತ್ತು ಮರುನೆಲೆ ಕಾಯ್ದೆ–2013ರ ನಿಬಂಧನೆಗಳ ಪ್ರಕಾರ ಜೀವನೋಪಾಯಕ್ಕೆ ಧಕ್ಕೆಯಾಗುವ ವ್ಯಕ್ತಿಗೂ ಪರಿಹಾರ ಪಡೆಯುವ ಹಕ್ಕು ಇದೆ. ಆದ್ದರಿಂದ ಕೇವಲ ಆಸ್ತಿಯ ಮಾಲೀಕತ್ವದ ಆಧಾರದ ಮೇಲೆ ಸಂಪೂರ್ಣ ಪರಿಹಾರ ಮೊತ್ತವನ್ನು ಪುರಸಭೆಗೆ ನೀಡಿರುವ ಕ್ರಮ ಮರುಪರಿಶೀಲನೆಗೆ ಒಳಪಡಬೇಕು ಎಂದು ಸಮಿತಿ ಒತ್ತಾಯಿಸಿದೆ.
ಅನುಸೂಚಿತ ಜಾತಿ ಹಾಗೂ ಬುಡಕಟ್ಟು ಸಮುದಾಯಗಳ ಭೂಸ್ವಾಧೀನದ ಸಂದರ್ಭದಲ್ಲಿ ವಿಶೇಷ ರಕ್ಷಣಾ ಕ್ರಮ ಗಳನ್ನು ಅನುಸರಿಸಬೇಕೆಂಬ ಕಾಯ್ದೆಯ ನಿಯಮಗಳನ್ನು ಪಾಲಿಸದೇ ಕುಟುಂಬಗಳನ್ನು ತೆರವುಗೊಳಿಸಲು ಯತ್ನಿಸ ಲಾಗುತ್ತಿದೆ ಎಂದು ಸಮಿತಿ ಆರೋಪಿಸಿದೆ. ಬಾಧಿತ ಕುಟುಂಬಗಳಿಗೆ ಸೂಕ್ತ ಪರಿಹಾರ, ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಪ್ರಕ್ರಿಯೆ ಪೂರ್ಣಗೊಳಿಸದೆ ಯಾವುದೇ ತೆರವು ಕಾರ್ಯಾಚರಣೆ ನಡೆಸಬಾರದು ಎಂದು ಆಗ್ರಹಿಸಿದೆ.
ಮಳೆಗಾಲದ ಸಂದರ್ಭದಲ್ಲಿ ಬಡ ಕುಟುಂಬಗಳನ್ನು ಬೀದಿಪಾಲು ಮಾಡುವ ಪ್ರಯತ್ನವನ್ನು ಜಿಲ್ಲಾಡಳಿತ ತಕ್ಷಣವೇ ತಡೆದು, ಬಾಧಿತರಿಗೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಭಟ್ಕಳದ ನ್ಯಾಯವಾದಿ ರವೀಂದ್ರ ಮಂಗಳ ಹಗ್ಡೆ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ತುಳಸಿದಾಸ್ ಪಾವಸ್ಕರ್, ಜಿಲ್ಲಾ ಸಂಘಟನಾ ಸಂಚಾಲಕ ಕಿರಣ್, ದಲಿತ ಸಮಾ ಜದ ಮುಖಂಡ ನಾಗರಾಜ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.






