ಕಂಪ್ಯೂಟರ್ ಶಿಕ್ಷಕರ ನೇಮಕಾತಿ ಕರಡು ನಿಯಮ ತಿದ್ದುಪಡಿಗೆ ಎಐಐಟಿಎ ಆಗ್ರಹ

ಭಟ್ಕಳ: ಕಂಪ್ಯೂಟರ್ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಪ್ರಕಟಿಸಿರುವ ಕರಡು ನೇಮಕಾತಿ ನಿಯಮದಲ್ಲಿನ 'ಪಿಯುಸಿಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು' ಎಂಬ ಷರತ್ತನ್ನು ಕೈಬಿಟ್ಟು ಎಲ್ಲ ಅರ್ಹ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವಂತೆ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ (ರಿ.) (AIITA) ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದೆ.
ಶಾಲಾ ಶಿಕ್ಷಣ ಇಲಾಖೆಯು ಜೂನ್ 29ರಂದು ಪ್ರಕಟಿಸಿರುವ ಅಧಿಸೂಚನೆ ಸಂಖ್ಯೆ EP 50 DPI 2026ರ ಕರಡು ನೇಮಕಾತಿ ನಿಯಮಗಳಿಗೆ ಸಂಬಂಧಿಸಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಂಘದ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಆಕ್ಷೇಪಣೆ ಸಲ್ಲಿಸಿದ್ದಾರೆ.
ಕರಡು ನಿಯಮದಲ್ಲಿ ಕಂಪ್ಯೂಟರ್ ಶಿಕ್ಷಕರ ನೇಮಕಾತಿಗೆ ಎಸ್.ಎಸ್.ಎಲ್.ಸಿಯಲ್ಲಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡ ಹಾಗೂ ಪಿಯುಸಿಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು ಎಂಬ ಹೊಸ ಷರತ್ತು ಸೇರಿಸಲಾಗಿದೆ. ಆದರೆ ರಾಜ್ಯದ ಪದವಿಪೂರ್ವ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ಅಧ್ಯಯನ ಎಲ್ಲ ವಿದ್ಯಾರ್ಥಿಗಳಿಗೂ ಕಡ್ಡಾಯವಲ್ಲ. ವಿದ್ಯಾರ್ಥಿಗಳಿಗೆ ಭಾಷೆ ಆಯ್ಕೆ ಮಾಡುವ ಅವಕಾಶ ಇರುವುದರಿಂದ ಅನೇಕರು ಇಂಗ್ಲಿಷ್, ಉರ್ದು, ಹಿಂದಿ ಸೇರಿದಂತೆ ವಿವಿಧ ಭಾಷೆಗಳನ್ನು ಅಧ್ಯಯನ ಮಾಡಿರುತ್ತಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ವಿಶೇಷವಾಗಿ ಉರ್ದು ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ. ಪೂರ್ಣಗೊಳಿಸಿದ ಅನೇಕ ವಿದ್ಯಾರ್ಥಿಗಳು ಪಿಯುಸಿ ಯಲ್ಲಿ ಇಂಗ್ಲಿಷ್ ಹಾಗೂ ಉರ್ದು ಭಾಷೆಗಳನ್ನು ಆಯ್ಕೆ ಮಾಡುವುದು ಸಾಮಾನ್ಯವಾಗಿದೆ. ಅವರು ಬಿ.ಇಡಿ. ಹಾಗೂ ಕಂಪ್ಯೂಟರ್ ವಿಷಯದ ಅಗತ್ಯ ಶೈಕ್ಷಣಿಕ ಅರ್ಹತೆಗಳನ್ನು ಪಡೆದಿದ್ದರೂ, ಕೇವಲ ಪಿಯುಸಿಯಲ್ಲಿ ಕನ್ನಡ ಅಧ್ಯಯನ ಮಾಡಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಸೇವೆಯ ಅವಕಾಶದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸಂಘ ಆತಂಕ ವ್ಯಕ್ತಪಡಿಸಿದೆ.
ಈ ಷರತ್ತು ಶಿಕ್ಷಣ ವ್ಯವಸ್ಥೆಯ ವಾಸ್ತವಿಕತೆಗೆ ಹೊಂದಿಕೆಯಾಗದ ಅವೈಜ್ಞಾನಿಕ ನಿಯಮವಾಗಿದ್ದು, ಈಗಾಗಲೇ ವಿದ್ಯಾಭ್ಯಾಸ ಪೂರ್ಣಗೊಳಿಸಿರುವ ಸಾವಿರಾರು ಅಭ್ಯರ್ಥಿಗಳ ಉದ್ಯೋಗಾವಕಾಶವನ್ನು ಸೀಮಿತಗೊಳಿಸುವ ಸಾಧ್ಯತೆ ಇದೆ. ಅಲ್ಲದೆ ಉರ್ದು ಸೇರಿದಂತೆ ವಿವಿಧ ಭಾಷಾ ಹಿನ್ನೆಲೆಯ ಅಭ್ಯರ್ಥಿಗಳಿಗೆ ಅನ್ಯಾಯವಾಗುವ ಆತಂಕವೂ ಇದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.
ಅಭ್ಯರ್ಥಿಗಳಿಗೆ ಕನ್ನಡ ಭಾಷೆಯ ಜ್ಞಾನ ಇರಬೇಕು ಎಂಬ ಉದ್ದೇಶವನ್ನು ಸಂಘ ಬೆಂಬಲಿಸುತ್ತದೆ. ಆದರೆ ಅದನ್ನು ಕೇವಲ ಪಿಯುಸಿಯಲ್ಲಿ ಕನ್ನಡ ಅಧ್ಯಯನ ಮಾಡಿರುವ ಷರತ್ತಿಗೆ ಸೀಮಿತಗೊಳಿಸದೆ, ಎಸ್.ಎಸ್.ಎಲ್.ಸಿಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡಿರುವುದು ಅಥವಾ ಸರ್ಕಾರ ನಿಗದಿಪಡಿಸಿ ರುವ ಕನ್ನಡ ಭಾಷಾ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳನ್ನೂ ಅರ್ಹರೆಂದು ಪರಿಗಣಿಸುವಂತೆ ಕರಡು ನಿಯಮವನ್ನು ತಿದ್ದುಪಡಿ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕರಡು ನಿಯಮವನ್ನು ಮರುಪರಿಶೀಲಿಸಿ, ಎಲ್ಲ ಅರ್ಹ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವಂತೆ ತಿದ್ದುಪಡಿ ಮಾಡಬೇಕೆಂದು ಸಂಘ ಸರ್ಕಾರಕ್ಕೆ ಮನವಿ ಮಾಡಿದೆ.






