ತಂಝೀಮ್ ರಾಜಕೀಯ ಸಮಿತಿಯ ಸಂಚಾಲಕರಾಗಿ ಸೈಯ್ಯದ್ ಇಮ್ರಾನ್ ಲಂಕಾ ಮರು ಆಯ್ಕೆ

ಭಟ್ಕಳ: ಶತಮಾನೋತ್ಸವದ ಸಂಭ್ರಮ ಆಚರಿಸಿರುವ ಭಟ್ಕಳದ ಪ್ರತಿಷ್ಠಿತ ಸಾಮಾಜಿಕ ಹಾಗೂ ರಾಜಕೀಯ ಸಂಘಟನೆಯಾದ *ಮಜ್ಲಿಸ್-ಎ-ಇಸ್ಲಾಹ್ ವ ತಂಝೀಮ್ ಸಂಸ್ಥೆಯ ಮುಂದಿನ ಮೂರು ವರ್ಷದ ಅವಧಿಗೆ ರಾಜಕೀಯ ಸಮಿತಿ ಸಂಚಾಲಕರಾಗಿ ಹಿರಿಯ ನ್ಯಾಯವಾದಿ ಸೈಯ್ಯದ್ ಇಮ್ರಾನ್ ಲಂಕಾ ಮರು ಆಯ್ಕೆಯಾಗಿದ್ದಾರೆ.
ಸಂಸ್ಥೆಯ ನೂತನ ಕಾರ್ಯಕಾರಿ ಸಮಿತಿಯ ಆಂತರಿಕ ಚುನಾವಣೆಯಲ್ಲಿ ಅವರು ಮಾಜಿ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ಅಲ್ತಾಫ್ ಖರೂರಿ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಸೋಲಿಸಿ ಈ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಸೈಯ್ಯದ್ ಇಮ್ರಾನ್ ಲಂಕಾ ಅವರು ಕಳೆದ ಮೂರು ವರ್ಷಗಳಿಂದ ರಾಜಕೀಯ ಸಮಿತಿ ಸಂಚಾಲಕರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಅವರ ಮರು ಆಯ್ಕೆಯಿಂದ ತಂಝೀಮ್‌ನ ರಾಜಕೀಯ ಚಟುವಟಿಕೆ ಗಳು ಮತ್ತಷ್ಟು ಸಂಘಟಿತ ಹಾಗೂ ಪರಿಣಾಮಕಾರಿಯಾಗಿ ನಡೆಯಲಿವೆ ಎಂಬ ವಿಶ್ವಾಸವನ್ನು ಸಂಸ್ಥೆಯ ಸದಸ್ಯರು ವ್ಯಕ್ತಪಡಿಸಿದ್ದಾರೆ.
ನೂತನವಾಗಿ ಆಯ್ಕೆಯಾದ ಸೈಯ್ಯದ್ ಇಮ್ರಾನ್ ಲಂಕಾ ಅವರಿಗೆ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಮೌಲಾನಾ ಅಝೀಝುರ್‌ರಹ್ಮಾನ್ ನದ್ವಿ, ಕಾರ್ಯಕಾರಿ ಸಮಿತಿ ಸದಸ್ಯ ಜಾಲಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಆದಂ ಪಣಂಬೂರು ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.




