ಭಟ್ಕಳ: ಮತದಾರರ ಜಾಗೃತಿಗೆ ವಿವಿಧೆಡೆ ಸ್ವೀಪ್ ಕಾರ್ಯಕ್ರಮ

ಭಟ್ಕಳ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಹಾಗೂ ಮತದಾನ ಜಾಗೃತಿ ಅಭಿಯಾನದ ಅಂಗವಾಗಿ ತಾಲ್ಲೂಕಿನ ವಿವಿಧೆಡೆ ಸ್ವೀಪ್ ಸಮಿತಿಯ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮಗಳು ಸೋಮವಾರ ನಡೆದವು.
ಪ್ರಸಿದ್ಧ ಪ್ರವಾಸಿ ತಾಣ ಮುರ್ಡೇಶ್ವರದಲ್ಲಿ ತಾಲ್ಲೂಕು ಪಂಚಾಯಿತಿ ಸ್ವೀಪ್ ಸಮಿತಿಯ ಸಹಯೋಗದಲ್ಲಿ ಮಾವಳ್ಳಿ–2 ಗ್ರಾಮ ಪಂಚಾಯಿತಿ ವತಿಯಿಂದ ಮತದಾರರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಪರ್ಣಾ ನಾಯ್ಕ ಹಾಗೂ ಪಂಚಾಯಿತಿ ಸಿಬ್ಬಂದಿ ಭಾಗವಹಿಸಿದ್ದರು.
ಮಾವಿನಕುರ್ವೆ ಗ್ರಾಮ ಪಂಚಾಯಿತಿ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ, ಮತದಾನದ ಮಹತ್ವ ಸಾರುವ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಪಂಚಾಯಿತಿ ಕಾರ್ಯದರ್ಶಿ ಸಂಜಯ್ ಕೋಚೇರಿ, ಮುಖ್ಯ ಶಿಕ್ಷಕ ಗಜಾನನ ಹೆಗಡೆ, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಇದೇ ವೇಳೆ ಭಟ್ಕಳ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿ ಯಾನ (ಎನ್‌ಆರ್‌ಎಲ್‌ಎಂ) ಸಂಜೀವಿನಿ ಒಕ್ಕೂಟದ ತಾಲ್ಲೂಕು ಮಟ್ಟದ ಪದಾಧಿಕಾರಿಗಳಿಗೆ ಎಸ್‌ಐಆರ್ (Special Intensive Revision) ಅರ್ಜಿ ನಮೂನೆ ಭರ್ತಿ ಮಾಡುವ ಕುರಿತು ಸ್ವೀಪ್ ಸಮಿತಿಯಿಂದ ಕಾರ್ಯಾಗಾರ ಆಯೋಜಿಸಲಾಯಿತು.
ಕಾರ್ಯಾಗಾರದಲ್ಲಿ ತಾಲ್ಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ ರಾಜೇಶ್ ಮಹಾಲೆ, ತಾಲ್ಲೂಕು ಯೋಜನಾ ಧಿಕಾರಿ ಹೇಮಾ ನಾಯ್ಕ, ವಿಷಯ ನಿರ್ವಾಹಕ ರಾಘವೇಂದ್ರ ಪೂಜಾರಿ, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶಾಂತಿಕಾ ನಾಯ್ಕ, ಗೋಪಾಲ ನಾಯ್ಕ ಹಾಗೂ ವೆಂಕಟೇಶ ದೇವಾಡಿಗ ಉಪಸ್ಥಿತರಿದ್ದರು. ಉಷಾ ದೇವಾಡಿಗ ಮತ್ತು ವಿದ್ಯಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.






