ತಂಝೀಮ್ ಸೇವಾ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಿ: ಮೌಲಾನಾ ವಲಿಯುಲ್ಲಾ ಸಈದಿ ಫಲಾಹಿ

ಭಟ್ಕಳ: ಜಮಾಅತೆ ಇಸ್ಲಾಮಿ ಹಿಂದ್‌ನ ಉಪಾಧ್ಯಕ್ಷ ಮೌಲಾನಾ ವಲಿಯುಲ್ಲಾ ಸಈದಿ ಫಲಾಹಿ ಅವರು ಭಟ್ಕಳ ಪ್ರವಾಸದ ವೇಳೆ ಮಂಗಳವಾಋ (ಜು.೨೮) ಮಜ್ಲಿಸ್-ಎ-ಇಸ್ಲಾಹ್ ವ ತಂಝೀಮ್ ಕೇಂದ್ರ ಕಚೇರಿಗೆ ಭೇಟಿ ನೀಡಿ, ಪದಾಧಿಕಾರಿಗಳೊಂದಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಸೇವಾ ಚಟುವಟಿಕೆಗಳ ಕುರಿತು ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಂಝೀಮ್ ಕಳೆದ ಒಂದು ಶತಮಾನಕ್ಕೂ ಹೆಚ್ಚು ಕಾಲ ಭಟ್ಕಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಿಕ್ಷಣ, ಸಮಾಜಸೇವೆ ಮತ್ತು ಜನಕಲ್ಯಾಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿದರು.
ತಂಝೀಮ್ ತನ್ನ ಸೇವಾ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಿ, ಬಡ ಹಾಗೂ ಅಗತ್ಯವಿರುವ ಮುಸ್ಲಿಮೇತರ ಕುಟುಂಬಗಳಿಗೂ ಸಂಘಟಿತ ರೀತಿಯಲ್ಲಿ ನೆರವು ತಲುಪಿಸಲು ಪ್ರತ್ಯೇಕ ವಿಭಾಗ ಸ್ಥಾಪಿಸುವ ಬಗ್ಗೆ ಸಲಹೆ ನೀಡಿ ದರು. ಧರ್ಮ, ಜಾತಿ ಮತ್ತು ಸಮುದಾಯದ ಭೇದವಿಲ್ಲದೆ ಸಂಕಷ್ಟದಲ್ಲಿರುವ ಪ್ರತಿಯೊಬ್ಬರ ನೆರವಿಗೆ ಧಾವಿಸುವುದೇ ಇಸ್ಲಾಂನ ಮಾನವೀಯ ಸಂದೇಶವಾಗಿದ್ದು, ಇದರಿಂದ ಸಮಾಜದಲ್ಲಿ ಪರಸ್ಪರ ವಿಶ್ವಾಸ, ಸೌಹಾರ್ದ ಮತ್ತು ಸಾಮರಸ್ಯ ಮತ್ತಷ್ಟು ಬಲಗೊಳ್ಳಲಿದೆ ಎಂದು ಅವರು ಹೇಳಿದರು.
ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಘಟಕದ ಕಾರ್ಯದರ್ಶಿ ಹಾಗೂ ಮಜ್ಲಿಸ್ ಉಲ್ ಉಲಮಾ ಕರ್ನಾಟಕದ ಸಂಚಾಲಕ ಮೌಲಾನಾ ವಹೀದುದ್ದೀನ್ ಖಾನ್ ಉಮರಿ ಮಾತನಾಡಿ, ತಂಝೀಮ್‌ನ ಸಾಮಾಜಿಕ ಚಟುವಟಿಕೆ ಗಳನ್ನು ಶ್ಲಾಘಿಸಿದರು.
ಆರಂಭದಲ್ಲಿ ತಂಝೀಮ್ ಸದಸ್ಯ ಮೌಲಾನ ಸೈಯ್ಯದ್ ಯಾಸಿರ್ ಬರ್ಮಾವರ್ ನದ್ವಿ ಸ್ವಾಗತಿಸಿ, ಸಂಸ್ಥೆಯ ಚಟುವಟಿಕೆಗಳ ಪರಿಚಯ ನೀಡಿದರು. ಪ್ರಧಾನ ಕಾರ್ಯದರ್ಶಿ ಮೌಲಾನ ಅಜೀಜುರ್ ರಹ್ಮಾನ್ ರುಕ್ನುದ್ದೀನ್ ನದ್ವಿ ಕಾರ್ಯಕ್ರಮ ನಿರೂಪಿಸಿದರು. ತಂಝೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಸಮಿತಿ ಸದಸ್ಯ ಯೂನುಸ್ ರುಕ್ನುದ್ದೀನ್ ವಂದಿಸಿದರು.
ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ವಲಯ ಸಂಚಾಲಕ ಸಯೀದ್ ಇಸ್ಮಾಯಿಲ್, ತಂಝೀಮ್ ಉಪಾಧ್ಯಕ್ಷ ಕಮರ್ ಸದಾ, ಬಿಲಾಲ್ ಕಮ್ರಿ, ಅಬ್ದುಸ್ಸಲಾಂ, ತಂಝೀಮ್ ಸದಸ್ಯರು ಹಾಗೂ ಜಮಾಅತೆ ಇಸ್ಲಾಮಿ ಹಿಂದ್‌ನ ಸ್ಥಳೀಯ ಪದಾಧಿಕಾರಿಗಳು ಉಪಸ್ಥಿತರಿದ್ದರು.






