ಕೊಟ್ಟು ಕಸಿದುಕೊಂಡ ಸಚಿವ ಸ್ಥಾನ; ಮಂಕಾಳ ವೈದ್ಯರಿಗೆ ಅನ್ಯಾಯ: ಅಭಿಮಾನಿಗಳ ಆರೋಪ

ಭಟ್ಕಳ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಾಜಿ ಸಚಿವ ಹಾಗೂ ಭಟ್ಕಳ-ಹೊನ್ನಾವರ ಕ್ಷೇತ್ರದ ಶಾಸಕ ಮಂಕಾಳ ಎಸ್. ವೈದ್ಯ ಅವರ ಹೆಸರು ಕೊನೆಯ ಕ್ಷಣದಲ್ಲಿ ಪಟ್ಟಿಯಿಂದ ಕೈಬಿಟ್ಟಿರುವ ಬೆಳವಣಿಗೆ ಬೆಂಬಲಿಗರಲ್ಲಿ ತೀವ್ರ ನಿರಾಸೆ ಮೂಡಿಸಿದೆ ಎಂದು ಅವರ ಅಭಿಮಾನಿಗಳು ತಿಳಿಸಿದ್ದಾರೆ.
ಈ ಬೆಳವಣಿಗೆಯನ್ನು "ಕೊಟ್ಟು ಕಸಿದುಕೊಂಡ ಸಚಿವ ಸ್ಥಾನ" ಎಂದು ಹಲವು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯ ರಾಜಕೀಯ ಇತಿಹಾಸ ದಲ್ಲೇ ಇದು ಉತ್ತರ ಕನ್ನಡಕ್ಕೆ ಮಾಡಿದ ಅವಮಾನ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.
ಸಚಿವ ಸಂಪುಟ ವಿಸ್ತರಣೆ ವೇಳೆ ಮಂಕಾಳ ವೈದ್ಯ ಅವರ ಹೆಸರಿನ ನಿರೀಕ್ಷೆಯೊಂದಿಗೆ ಭಟ್ಕಳದಿಂದ ಬೆಂಗಳೂರಿಗೆ ತೆರಳಿದ್ದ ಬೆಂಬಲಿಗರು ಮತ್ತು ಮುಖಂಡರು ಕೊನೆಯ ಕ್ಷಣದ ಬೆಳವಣಿಗೆಯ ಬಳಿಕ ಮೌನವಾಗಿ ಹಿಂದಿರುಗಿದರು. ತಮ್ಮ ನಾಯಕನಿಗೆ ಆಗಿರುವ ಅನ್ಯಾಯದ ವಿರುದ್ಧ ಯಾವುದೇ ಸಂಘಟಿತ ಪ್ರತಿಭಟನೆ ಅಥವಾ ಸಾರ್ವಜನಿಕ ಆಕ್ರೋಶ ವ್ಯಕ್ತವಾಗದಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಮಂಕಾಳ ವೈದ್ಯ ಅವರಿಂದ ವಿವಿಧ ರೀತಿಯಲ್ಲಿ ನೆರವು ಪಡೆದ ಸಾವಿರಾರು ಫಲಾನುಭವಿಗಳು, ಮೀನುಗಾರ ಸಮುದಾಯದವರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬೀದಿಗಿಳಿದು ಧ್ವನಿ ಎತ್ತಿದ್ದರೆ ಅದು ರಾಜ್ಯಮಟ್ಟದ ಅಭಿಯಾನವಾಗುತ್ತಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಮಾತ್ರ ಸೀಮಿತಗೊಂಡ ಬೆಂಬಲಿಗರು, ನಾಯಕನ ಪರವಾಗಿ ಸಂಘಟಿತ ಹೋರಾಟ ನಡೆಸುವಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರಳ, ಸಜ್ಜನ, ಶಿಕ್ಷಣಪ್ರೇಮಿ ಹಾಗೂ ಜನಾನುರಾಗಿ ನಾಯಕನಾಗಿ ಗುರುತಿಸಿಕೊಂಡಿರುವ ಮಂಕಾಳ ವೈದ್ಯ ಅವರು ಸಚಿವರಾಗದಿರುವುದು ಅವರ ವೈಯಕ್ತಿಕ ನಷ್ಟಕ್ಕಿಂತ ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರತಿನಿಧಿತ್ವಕ್ಕೆ ಹಿನ್ನಡೆಯಾಗಿದೆ. ಲಿಂಗಾಯತ ಲಾಬಿಯ ಪ್ರಭಾವದ ನಡುವೆ ಬಡ ಮೀನುಗಾರ ಕುಟುಂಬದ ಮಗನ ಸಚಿವ ಕನಸು ನನಸಾಗದೆ ಉಳಿದಿದೆ ಎಂಬ ಅಭಿಪ್ರಾಯವೂ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಆದರೂ ಮಂಕಾಳ ವೈದ್ಯ ಅವರು ಯಾವುದೇ ಅಸಮಾಧಾನ ವ್ಯಕ್ತಪಡಿಸದೆ ಕ್ಷೇತ್ರದ ಅಭಿವೃದ್ಧಿ ಮತ್ತು ಜನಸೇವೆಯನ್ನು ಮುಂದುವರಿಸುವ ನಿಲುವು ತಾಳಿರುವುದು ಅವರ ರಾಜಕೀಯ ಪ್ರಬುದ್ಧತೆಗೆ ಸಾಕ್ಷಿಯಾಗಿದೆ. ಸಚಿವ ಸ್ಥಾನ ಕೈತಪ್ಪಿದರೂ ಜನರ ವಿಶ್ವಾಸವೇ ತಮ್ಮ ದೊಡ್ಡ ಶಕ್ತಿ ಎಂಬ ಸಂದೇಶವನ್ನು ಅವರು ಹಾಗೂ ಅವರ ಕುಟುಂಬ ಈಗಾಗಲೇ ನೀಡಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳತ್ತ ಮತ್ತಷ್ಟು ಗಮನ ಹರಿಸುವ ನಿರೀಕ್ಷೆಯನ್ನು ಬೆಂಬಲಿಗರು ವ್ಯಕ್ತಪಡಿಸಿದ್ದಾರೆ.






