ಕೋಮು ಸೌಹಾರ್ದತೆಗೆ ಮಾಧ್ಯಮಗಳ ಪಾತ್ರ ಮಹತ್ವದ್ದು | 'ಐಡಿಯಾ ಆಫ್ ಇಂಡಿಯಾ' ಕುರಿತು ಎಸ್‌ಐಒ ರೌಂಡ್ ಟೇಬಲ್ ಚರ್ಚೆ

ಭಟ್ಕಳ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್‌ಐಒ) ಭಟ್ಕಳ ಘಟಕದ ವತಿಯಿಂದ 'ಐಡಿಯಾ ಆಫ್ ಇಂಡಿಯಾ' ವಿಷಯದ ಕುರಿತು ಬುಧವಾರ ಪಟ್ಟಣದ ದಾವತ್ ಸೆಂಟರ್‌ನಲ್ಲಿ ಪತ್ರಕರ್ತರು ಮತ್ತು ಮಾಧ್ಯಮ ಪ್ರತಿನಿಧಿಗಳೊಂದಿಗೆ ರೌಂಡ್ ಟೇಬಲ್ ಚರ್ಚೆ ನಡೆಯಿತು.
ಎಸ್‌ಐಒ ಕರ್ನಾಟಕ ರಾಜ್ಯಾಧ್ಯಕ್ಷ ಆದಿ ಅಲ್ ಹಸನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತದ ಶಕ್ತಿ ಅದರ ಧಾರ್ಮಿಕ, ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಯಲ್ಲಿದೆ ಎಂದು ಹೇಳಿದರು. ಸಂವಿಧಾನದ ಆಶಯಗಳನ್ನು ಉಳಿಸಿಕೊಂಡು ಎಲ್ಲ ಸಮುದಾಯಗಳ ನಡುವೆ ಪರಸ್ಪರ ವಿಶ್ವಾಸ, ಸಹಬಾಳ್ವೆ ಮತ್ತು ಸೌಹಾರ್ದವನ್ನು ಬಲಪಡಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.
ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮೌಲಾನಾ ಅಬುಲ್ ಕಲಾಂ ಆಝಾದ್ ಅವರಂತಹ ಮಹನೀಯರು ಪ್ರತಿಪಾದಿಸಿದ ಭಾರತದ ಪರಿಕಲ್ಪನೆಯು ಸಮಾನತೆ, ನ್ಯಾಯ, ಪ್ರಜಾಪ್ರಭುತ್ವ ಮತ್ತು ಸರ್ವಧರ್ಮ ಸಮಭಾವದ ತತ್ವಗಳ ಮೇಲೆ ನಿರ್ಮಿತವಾಗಿದೆ ಎಂದು ಅವರು ಹೇಳಿದರು. ಈ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಮಾಧ್ಯಮಗಳು ಮಹತ್ವದ ಪಾತ್ರ ವಹಿಸಬೇಕೆಂದು ಕರೆ ನೀಡಿದರು.
ಚರ್ಚೆಯಲ್ಲಿ ಪಾಲ್ಗೊಂಡ ಪತ್ರಕರ್ತರು, ಸಮಾಜದಲ್ಲಿ ಕೋಮು ಸೌಹಾರ್ದತೆ ಕಾಪಾಡುವಲ್ಲಿ ಮಾಧ್ಯಮಗಳ ಹೊಣೆಗಾರಿಕೆ, ವಾಸ್ತವಾಧಾರಿತ ಸುದ್ದಿಗಳ ಅಗತ್ಯತೆ, ಸಾಮಾಜಿಕ ಜಾಲತಾಣಗಳ ಪ್ರಭಾವ ಹಾಗೂ ಜವಾಬ್ದಾರಿ ಯುತ ಪತ್ರಿಕೋದ್ಯಮದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಎಸ್‌ಐಒ ಕರ್ನಾಟಕ ರಾಜ್ಯ ಕಾರ್ಯದರ್ಶಿ ಜೋಹರ್ ಕಾಶಿಫ್, ಭಟ್ಕಳ ಘಟಕದ ಅಧ್ಯಕ್ಷ ಝಯ್ಯಾನ್ ಬಂಗಾಲಿ ಹಾಗೂ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.






