ಸಕಾರಾತ್ಮಕ ಮಾಧ್ಯಮ ಬಳಕೆ ಜನಪರ ಸಮಸ್ಯೆಗಳ ಪರಿಹಾರಕ್ಕೆ ಪರಿಣಾಮಕಾರಿ: ರಾಬಿತಾ ಸೊಸೈಟಿ

ಭಟ್ಕಳ: ಮಾಧ್ಯಮವನ್ನು ಸಕಾರಾತ್ಮಕ ಹಾಗೂ ಜವಾಬ್ದಾರಿಯುತವಾಗಿ ಬಳಸಿಕೊಂಡರೆ ಸಮಾಜ ಹಾಗೂ ಸಮುದಾಯದ ಹಲವು ಸಮಸ್ಯೆಗಳಿಗೆ ಪರಿಹಾರದ ದಾರಿ ಕಂಡುಕೊಳ್ಳಬಹುದು ಎಂದು ರಾಬಿತಾ ಸೊಸೈಟಿ ಪ್ರಧಾನ ಕಾರ್ಯದರ್ಶಿ ಅತೀಕುರ್ ರಹ್ಮಾನ್ ಮುನೀರಿ ಹೇಳಿದರು.
ರಾಬಿತಾ ಸೊಸೈಟಿ ವತಿಯಿಂದ ಮಂಗಳವಾರ ರಾತ್ರಿ ರಾಬಿತಾ ಕಚೇರಿಯಲ್ಲಿ ಸ್ಥಳೀಯ ಪತ್ರಿಕೆಗಳು, ಸುದ್ದಿ ಜಾಲತಾಣಗಳು ಹಾಗೂ ವಿವಿಧ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಆಯೋಜಿಸಿದ್ದ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು.
ಸಮಾಜದ ವಿಚಾರಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದಾಗಿದೆ. ಸಾರ್ವಜನಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬೆಳಕಿಗೆ ತರುವ ಮೂಲಕ ಅವುಗಳ ಪರಿಹಾರಕ್ಕೆ ಮಾಧ್ಯಮ ಸಹಕಾರಿ ಯಾಗಬಹುದು. ಪತ್ರಕರ್ತರು ತಮ್ಮ ವೃತ್ತಿಪರ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ರಾಬಿತಾ ಸೊಸೈಟಿ ಅಧ್ಯಕ್ಷ ಮುಹಮ್ಮದ್ ಫಾರೂಕ್ ಮುಸ್ಬಾ ಮಾತನಾಡಿ, ಸಮಾಜದ ಅಭಿಪ್ರಾಯ ರೂಪಿಸುವಲ್ಲಿ ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಸುದ್ದಿ ಪ್ರಕಟಿಸುವಾಗ ಸಮತೋಲನ, ಜವಾಬ್ದಾರಿ ಹಾಗೂ ಸಕಾರಾತ್ಮಕ ದೃಷ್ಟಿಕೋನವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಭಟ್ಕಳದಲ್ಲಿ ವಿವಿಧ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉತ್ತಮ ಕಾರ್ಯಗಳು ಹಾಗೂ ಸಾಮಾಜಿಕ ಸೇವೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲು ಸಾಮಾಜಿಕ ಸಂಘಟನೆಗಳು ಮತ್ತು ಮಾಧ್ಯಮ ಸಂಸ್ಥೆಗಳ ನಡುವೆ ಉತ್ತಮ ಸಮನ್ವಯ ಅಗತ್ಯ ಎಂದು ಸಭೆಯಲ್ಲಿ ಒತ್ತಿ ಹೇಳಲಾಯಿತು.
ಸಭೆಯಲ್ಲಿ ಮೌಲಾನಾ ಅಬ್ದುಲ್ ಮತೀನ್ ಮುನೀರಿ, ಹಿರಿಯ ಪತ್ರಕರ್ತ ಡಾ.ಮುಹಮ್ಮದ್ ಹನೀಫ್ ಶಬಾಬ್, ಭಟ್ಕಲೀಸ್ ಡಾಟ್ ಕಾಂ ಅಧ್ಯಕ್ಷ ಮುಹಮ್ಮದ್ ಮೊಹ್ಸಿನ್ ಶಾಬಂದ್ರಿ, ಜೀಲಾನಿ ಮೊಹತೇಶಂ, ಆಫ್ತಾಬ್ ಎಂ.ಜೆ., ಯಾಸಿರ್ ಕಾಸಿಂಜಿ, ನವೀದ್ ಇಕ್ಕೇರಿ, ಮೌಲಾನಾ ಅತೀಕುರ್ ರಹ್ಮಾನ್ ಡಾಂಗಿ ನದ್ವಿ, ಅಬ್ದುಲ್ ಮುಅಝ್ ಎಸ್.ಜೆ., ಮುಹಿಯುದ್ದೀನ್ ರುಕ್ನುದ್ದೀನ್, ಅಥರ್ ಪೀರಝಾದೆ, ಅತೀಕುರ್ ರಹ್ಮಾನ್ ಶಾಬಂದ್ರಿ , ಪತ್ರಕರ್ತ ಎಂ.ಆರ್. ಮಾನ್ವಿ, ಅಬ್ದುಲ್ ಬಾಸಿತ್ ಇಕ್ಕೇರಿ ಮುಂತಾದವರು ಉಪಸ್ಥಿತರಿದ್ದರು.






