ಭಟ್ಕಳದ ವಿದ್ಯಾರ್ಥಿಗಳ ಸಾಧನೆ: ಪಿಎಚ್‌ಡಿಯಲ್ಲಿ ಪ್ರಥಮ, ದ್ವಿತೀಯ ಸ್ಥಾನ; ಸ್ನಾತಕೋತ್ತರದಲ್ಲೂ ಉತ್ತಮ ಫಲಿತಾಂಶ

ಭಟ್ಕಳ: ಈಜಿಪ್ಟ್‌ನ ಪ್ರತಿಷ್ಠಿತ ಅಲ್‌ಅಝರ್ ವಿಶ್ವವಿದ್ಯಾಲಯದಲ್ಲಿ ಭಟ್ಕಳದ ನಾಲ್ವರು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಭಟ್ಕಳ ಹಾಗೂ ದೇಶದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪಿಎಚ್‌ಡಿ ಪ್ರಥಮ ವರ್ಷದ ಅದಬ್ ವನ್ನಖ್ದ್ (ಸಾಹಿತ್ಯ ಮತ್ತು ವಿಮರ್ಶೆ) ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಸೈಯದ್ ನಬೀಗ್ ಬರ್ಮಾವರ್ ನದ್ವಿ ಶೇ.92 ಅಂಕ ಗಳಿಸಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದರೆ, ಅಂಝರ್ ಗವಾಯಿ ಶೇ.87 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಇದೇ ವೇಳೆ ಅಲ್‌ಅಝರ್‌ನ ತಫ್ಸೀರ್ ವಿಭಾಗದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ಅಬೂಬಕರ್ ಸಿದ್ದೀಕ್ ನಾಯ್ತೆ ಶೇ.92.11 ಹಾಗೂ ಮುಹಮ್ಮದ್ ಅಹ್ಮದ್ ರುಕ್ನುದ್ದೀನ್ ಶೇ.83.77 ಅಂಕ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಅಲ್‌ಅಝರ್‌ನಲ್ಲಿ ಪಿಎಚ್‌ಡಿ ಪ್ರವೇಶ ಪಡೆಯುವುದು ಸುಲಭವಲ್ಲ. ಸಾಮಾನ್ಯವಾಗಿ ಭಾರತೀಯ ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಪದವಿ ಬಳಿಕ ಪಿಎಚ್‌ಡಿ ಪ್ರವೇಶ ಪಡೆಯುತ್ತಾರೆ. ಆದರೆ ಸೈಯದ್ ನಬೀಗ್ ಬರ್ಮಾವರ್ ನದ್ವಿ ಹಾಗೂ ಅಂಝರ್ ಗವಾಯಿ ಅವರು ಚೆನ್ನೈನಿಂದ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ, ಉತ್ತಮ ಫಲಿತಾಂಶದ ಆಧಾರದ ಮೇಲೆ ಅಲ್‌ಅಝರ್‌ನಲ್ಲಿ ನೇರವಾಗಿ ಪಿಎಚ್‌ಡಿ ಪ್ರವೇಶ ಪಡೆದಿದ್ದರು ಎಂದು ತಿಳಿದುಬಂದಿದೆ.
ಅಲ್‌ಅಝರ್‌ನಂತಹ ಜಾಗತಿಕ ಪ್ರಸಿದ್ಧ ಶೈಕ್ಷಣಿಕ ಸಂಸ್ಥೆಯಲ್ಲಿ ಭಟ್ಕಳದ ನಾಲ್ವರು ವಿದ್ಯಾರ್ಥಿಗಳು ಏಕಕಾಲದಲ್ಲಿ ಉತ್ತಮ ಸಾಧನೆ ಮಾಡಿರುವುದು ಗಮನಾರ್ಹವಾಗಿದೆ.






