ಕರುಣೆ – ಮನುಷ್ಯತ್ವದ ಮೇಲೆ ಸಮಾಜ ನಿರ್ಮಾಣ ಅಗತ್ಯ: ಮುಹಮ್ಮದ್ ಕುಂಞಿ
‘ಸೀರತ್ ಗೆಟ್ ಟುಗೆದರ್’ ಕಾರ್ಯಕ್ರಮ

ಭಟ್ಕಳ: ಸಮಾಜದಲ್ಲಿ ಕರುಣೆ, ಪ್ರೀತಿ ಮತ್ತು ಮನುಷ್ಯತ್ವ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಮತ್ತು ಸಂದೇಶಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಹೇಳಿದರು.
ನಗರದ ಹೋಟೆಲ್ ರಾಯಲ್ ಓಕ್‌ನಲ್ಲಿ ಮಂಗಳವಾರ ಸಂಜೆ ‘ಕ್ರಾಂತಿಯ ಜ್ಯೋತಿ ಬೆಳಗಿಸಿದ ಪ್ರವಾದಿ ಮುಹಮ್ಮದ್ (ಸ)’ ಸೀರತ್ ಅಭಿಯಾನದ ಅಂಗವಾಗಿ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಘಟಕ ಆಯೋಜಿಸಿದ್ದ ‘ಸೀರತ್ ಗೆಟ್ ಟು ಗೆದರ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರವಾದಿ ಮುಹಮ್ಮದ್ (ಸ) ಅವರ ಜೀವನವು ಆರಾಧನೆ, ಕುಟುಂಬ, ವ್ಯಾಪಾರ, ಸಾಮಾಜಿಕ ಬದುಕು, ಆಡಳಿತ ಸೇರಿದಂತೆ ಜೀವನದ ಎಲ್ಲ ಕ್ಷೇತ್ರಗಳಿಗೂ ಮಾರ್ಗದರ್ಶನ ನೀಡುವ ಸಮಗ್ರ ಮಾದರಿಯಾಗಿದೆ. ಪರಸ್ಪರ ಪ್ರೀತಿ, ಕರುಣೆ, ಸಹೋದರತ್ವ ಮತ್ತು ಗೌರವದ ಮೂಲಕವೇ ಬಲಿಷ್ಠ ಸಮಾಜ ನಿರ್ಮಿಸಲು ಸಾಧ್ಯ. ಮನುಷ್ಯರ ನಡುವಿನ ಹಗೆ, ಅಪನಂಬಿಕೆ ಹಾಗೂ ತಪ್ಪು ಕಲ್ಪನೆಗಳನ್ನು ದೂರಗೊಳಿಸಿ ಪರಸ್ಪರ ಅರಿತುಕೊಂಡು ಬದುಕುವ ಅಗತ್ಯವಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಹಮ್ಮದ್ ರಝಾ ಮಾನ್ವಿ, ‘ಪರಸ್ಪರ ತಿಳಿದುಕೊಳ್ಳುವ ಮತ್ತು ಅರಿತುಕೊಳ್ಳುವ ಇಂತಹ ಕಾರ್ಯಕ್ರಮಗಳು ಹೆಚ್ಚಾದಾಗ ಸಮಾಜದಲ್ಲಿನ ಅಂತರ ಕಡಿಮೆಯಾಗುತ್ತದೆ. ಸೌಹಾರ್ದಯುತ ವಾತಾವರಣ ನಿರ್ಮಾಣಕ್ಕೆ ಇವು ಸಹಕಾರಿ’ ಎಂದರು.
ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಘಟಕದ ಅಧ್ಯಕ್ಷ ಮೌಲಾನಾ ಸಯ್ಯದ್ ಝುಬೈರ್ ಎಸ್.ಎಂ., ಕಾರ್ಯದರ್ಶಿ ರವೂಫ್ ಅಹ್ಮದ್ ಸವಣೂರು, ಸೀರತ್ ಅಭಿಯಾನದ ಸಂಚಾಲಕ ಮುಜಾಹಿದ್ ಮುಸ್ತಫಾ, ಮಾಜಿ ಶಾಸಕ ಜೆ.ಡಿ. ನಾಯ್ಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ಕಾರ್ಮಿಕ ಮುಖಂಡ ಜೆ.ಎನ್. ರೇವಣಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸೀರತ್ ರಸ ಪ್ರಶೆ ಸ್ಪರ್ಧೆ ಯ ಬಹುಮಾನ ವಿತರಣೆ ಮಾಡಲಾಯಿತು.






