ಸಮುದ್ರದಲ್ಲಿ ಮೀನುಗಾರಿಕೆ ವೇಳೆ ಯುವಕ ನೀರುಪಾಲು

ಭಟ್ಕಳ: ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ರೋಷನ್ ಮೊಹಲ್ಲಾ ಸಮೀಪ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ 19 ವರ್ಷದ ಯುವಕ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರುಪಾಲಾದ ಘಟನೆ ಬುಧವಾರ ನಡೆದಿದೆ.
ಮೃತ ಯುವಕನನ್ನು ರಿಯಾಝ್ ಹೋದೆಕರ್ ಅವರ ಪುತ್ರ ತನ್ಸೀಫ್ ಎಂದು ಗುರುತಿಸಲಾಗಿದೆ.
ತನ್ಸೀಫ್ ಬುಧವಾರ ಮಧ್ಯಾಹ್ನ ಇಬ್ಬರು ಸ್ನೇಹಿತರೊಂದಿಗೆ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ. ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬಲೆ ಬೀಸಿದ ಬಳಿಕ ಸಮುದ್ರದ ಒಳಭಾಗಕ್ಕೆ ತೆರಳಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಏಕಾಏಕಿ ಬಲವಾದ ಅಲೆಗಳು ಅಪ್ಪಳಿಸಿದ್ದರಿಂದ ಆತ ಸಮುದ್ರದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದ. ಘಟನೆ ಬಳಿಕ ತಕ್ಷಣವೇ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಬುಧವಾರ ಇಡೀ ದಿನ ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ. ಗುರುವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಸಮುದ್ರದಲ್ಲಿ ತನ್ಸೀಫ್ ಅವರ ಮೃತದೇಹ ಪತ್ತೆಯಾಗಿದೆ.
ಮಾಹಿತಿ ತಿಳಿದ ಹೊನ್ನಾವರ ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹವನ್ನು ಹೊನ್ನಾವರ ಆಸ್ಪತ್ರೆಗೆ ಸಾಗಿಸಿದರು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಮೂರು ಸಹೋದರರಲ್ಲಿ ತನ್ಸೀಫ್ ಎರಡನೆಯವರಾಗಿದ್ದರು. ಹೊನ್ನಾವರದ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅವರು ಬಿಡುವಿನ ವೇಳೆಯಲ್ಲಿ ಮೀನುಗಾರಿಕೆ ವೃತ್ತಿಯನ್ನೂ ಮಾಡುತ್ತಿದ್ದರು. ಈ ಕುರಿತು ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.




