ನಿರ್ಲಕ್ಷಿತ ಪ್ರದೇಶಗಳಿಗೆ ಪಿಡಿಒಗಳು ಭೇಟಿ ನೀಡಿ ಸಮಸ್ಯೆ ಪರಿಹರಿಸಲಿ: ಮಂಕಾಳ ಎಸ್. ವೈದ್ಯ

ಭಟ್ಕಳ: ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ವಾರದಲ್ಲಿ ಕನಿಷ್ಠ ಅರ್ಧ ಗಂಟೆಯಾದರೂ ಗ್ರಾಮೀಣ ಪ್ರದೇಶದ ಶಾಲೆ, ಅಂಗನವಾಡಿ ಸೇರಿದಂತೆ ನಿರ್ಲಕ್ಷಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ವಿಧಾನಮಂಡಲದ ಉಪಸಭಾಧ್ಯಕ್ಷ ಮಂಕಾಳ ಎಸ್. ವೈದ್ಯ ಸೂಚಿಸಿದರು.
ಭಟ್ಕಳ ತಾಲ್ಲೂಕು ಪಂಚಾಯತ್ ಸಭಾಭವನದಲ್ಲಿ ಬುಧವಾರ ಭಟ್ಕಳ ಮತ್ತು ಹೊನ್ನಾವರ ಕ್ಷೇತ್ರ ವ್ಯಾಪ್ತಿಯ ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಮರ–ಗಿಡಗಳ ಕೊಂಬೆಗಳ ತೆರವು, ರಸ್ತೆ ಗುಂಡಿ ಮುಚ್ಚುವುದು, ವಿದ್ಯುತ್ ಬಿಲ್ ಪಾವತಿ, ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ದುರಸ್ತಿ ಸೇರಿದಂತೆ ಮೂಲಸೌಕರ್ಯ ಕಾಮಗಾರಿಗಳಿಗೆ ಆದ್ಯತೆ ನೀಡ ಬೇಕು. ಕ್ರಿಯಾ ಯೋಜನೆ ರೂಪಿಸಿ ಅಗತ್ಯ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಂಡು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
15ನೇ ಹಣಕಾಸು ಆಯೋಗದಡಿ ಭಟ್ಕಳ ಮತ್ತು ಹೊನ್ನಾವರ ತಾಲ್ಲೂಕುಗಳಿಗೆ ಮಂಜೂರಾದ ಸುಮಾರು ₹50 ಕೋಟಿ ಅನುದಾನ ಬಳಕೆಯಾಗದೆ ಉಳಿದಿದೆ. ಆಡಳಿತಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಈ ತಿಂಗಳಾಂತ್ಯದೊಳಗೆ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
2026–27ನೇ ಸಾಲಿನಿಂದ ಅನುಷ್ಠಾನಗೊಳ್ಳಲಿರುವ 16ನೇ ಹಣಕಾಸು ಆಯೋಗದ ಅನುದಾನವನ್ನು ಸಹ ಸೌಲಭ್ಯ ವಂಚಿತ ಪ್ರದೇಶಗಳನ್ನು ಗುರುತಿಸಿ, ಅಗತ್ಯಕ್ಕೆ ಅನುಗುಣವಾಗಿ ಕ್ರಿಯಾ ಯೋಜನೆ ರೂಪಿಸಿ ಬಳಸಬೇಕು ಎಂದರು.
ಸಭೆಯಲ್ಲಿ ಭಟ್ಕಳ ತಾಲ್ಲೂಕಿನ ಹಾಡವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಡಿಲು ಶಾಲಾ ಕಟ್ಟಡ, ಕಾಯ್ಕಿಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂತನ ಕಾಲೇಜು ಕಟ್ಟಡ, ಬೈಲೂರು ಮತ್ತು ಮಾವಳ್ಳಿ ಗ್ರಾಮ ಪಂಚಾಯಿತಿಗಳ ಇಕ್ಕಟ್ಟಾದ ರಸ್ತೆ ಹಾಗೂ ಚರಂಡಿ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಹೊನ್ನಾವರ ತಾಲ್ಲೂಕಿನ ಚಿಕ್ಕನಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಡಹಾಳ ದೇವಸ್ಥಾನಕೇರಿ ಶಾಲಾ ಕೊಠಡಿ, ಕುದ್ರಿಗಿ ಅಂಗನವಾಡಿ ಕಟ್ಟಡ ಹಾಗೂ ಅನಂತವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಸಭೆಯಲ್ಲಿ ವಿವರವಾಗಿ ಚರ್ಚೆ ನಡೆಯಿತು.
ಭಟ್ಕಳ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಎಂ., ಹೊನ್ನಾವರ ತಾಲ್ಲೂಕು ಪಂಚಾ ಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪುಟ್ಟೆಗೌಡ, ಭಟ್ಕಳ ಹಾಗೂ ಹೊನ್ನಾವರ ಸಹಾಯಕ ನಿರ್ದೇಶಕರಾದ ಉದಯ ಡಿ. ಬೋರಕರ್ ಮತ್ತು ಕಿರಣಕುಮಾರ್ ನಾಯ್ಕ ಹಾಗೂ ಎರಡೂ ತಾಲ್ಲೂಕುಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ಕರಿಯಪ್ಪ ನಾಯ್ಕ ಸ್ವಾಗತಿಸಿ ವಂದಿಸಿದರು. ವ್ಯವಸ್ಥಾಪಕ ಕೃಷ್ಣಕಾಂತ ನಾಯ್ಕ ಸಹಕರಿಸಿದರು.






