ಮದೀನಾ ವಿಶ್ವವಿದ್ಯಾಲಯದ ಸ್ಪರ್ಧೆಯಲ್ಲಿ ಭಟ್ಕಳದ ವಿದ್ಯಾರ್ಥಿಗೆ ದ್ವಿತೀಯ ಸ್ಥಾನ

ಭಟ್ಕಳ: ಮದೀನಾ ಮುನವ್ವರದ ಇಸ್ಲಾಮಿಕ್ ವಿಶ್ವವಿದ್ಯಾಲಯದಲ್ಲಿ ನಡೆದ ‘ಸವಾಇದ್ ಬಿನಾ’ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಟ್ಕಳದ ಜಾಮಿಯಾ ಇಸ್ಲಾಮಿಯಾ ಭಟ್ಕಳದ ಹಳೆ ವಿದ್ಯಾರ್ಥಿ ಅಬ್ದುಲ್ ಖಾದರ್ ಮುಹಮ್ಮದ್ ಮೀರಾನ್ ನದ್ವಿ ಅವರ ‘ಮನ್‌ಸತ್ ಅಝ್‌ಝಕಾತ್’ (Zakat Pay) ಯೋಜನೆ ‘ಆರ್ಥಿಕ ಅಭಿವೃದ್ಧಿ ಮತ್ತು ಉದ್ಯಮಶೀಲತೆ’ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದೆ.
ವಿಶ್ವದ ವಿವಿಧೆಡೆಯಿಂದ ಒಟ್ಟು 457 ಯೋಜನೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಒಂದು ವರ್ಷದ ತರಬೇತಿ ಹಾಗೂ ವಿವಿಧ ಹಂತಗಳ ಪರಿಶೀಲನೆಯ ಬಳಿಕ 13 ಯೋಜನೆಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು, ಅಂತಿಮವಾಗಿ ಮೂರು ಯೋಜನೆಗಳಿಗೆ ಬಹುಮಾನ ನೀಡಲಾಯಿತು. ಅವುಗಳಲ್ಲಿ ಅಬ್ದುಲ್ ಖಾದರ್ ಅವರ ಯೋಜನೆಯೂ ಒಂದಾಗಿದೆ.
‘ಮನ್‌ಸತ್ ಅಝ್‌ಝಕಾತ್’ ಯೋಜನೆಯು ದಾನ, ಮದರಸ, ಮಸೀದಿ ಹಾಗೂ ಲಾಭರಹಿತ ಸಂಸ್ಥೆಗಳಿಗೆ ಸಂಬಂಧಿಸಿದ ಆರ್ಥಿಕ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರ ಒದಗಿಸುವ ಉದ್ದೇಶ ಹೊಂದಿದೆ. ಜಕಾತ್ ಮೊತ್ತವು ಅರ್ಹ ಫಲಾನುಭವಿಗಳಿಗೆ ತಲುಪುವುದನ್ನು ಖಚಿತಪಡಿಸುವ ಪರಿಶೀಲನಾ ವ್ಯವಸ್ಥೆ ಹಾಗೂ ಮದರಸ–ಮಸೀದಿಗಳಿಗೆ ಪಾರದರ್ಶಕ ಕ್ರೌಡ್‌ಫಂಡಿಂಗ್ ವ್ಯವಸ್ಥೆಯನ್ನು ಯೋಜನೆಯಲ್ಲಿ ರೂಪಿಸಲಾಗಿದೆ ಎಂದು ವರದಿ ತಿಳಿಸಿದೆ.
ಸ್ಪರ್ಧೆಯಲ್ಲಿ ಸಿರಿಯಾದ ಇಮಾದ್ ಫುವಾದ್ ಅಲ್‌ರುವೈಶಿ ಪ್ರಥಮ ಸ್ಥಾನ ಪಡೆದರೆ, ಸುಡಾನ್ ವಿದ್ಯಾರ್ಥಿಗಳ ತಂಡ ತೃತೀಯ ಸ್ಥಾನ ಪಡೆದಿದೆ.
ಸೌದಿ ಅರೇಬಿಯಾದ ‘ವಿಷನ್ 2030’ ಆಶಯದಡಿ ಯುವಕರ ಪ್ರತಿಭೆ ಹಾಗೂ ನವೀನ ಆಲೋಚನೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿತ್ತು. ಸೌದಿ ರಾಷ್ಟ್ರೀಯ ದಿನದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಅಧ್ಯಕ್ಷರು ಅಬ್ದುಲ್ ಖಾದರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಅಬ್ದುಲ್ ಖಾದರ್ ಮುಹಮ್ಮದ್ ಮೀರಾನ್ ನದ್ವಿ ಅವರು ಭಟ್ಕಳದ ಜಾಮಿಯಾ ಇಸ್ಲಾಮಿಯಾದಲ್ಲಿ ಆಲಿಮಿಯತ್ ಶಿಕ್ಷಣ ಪೂರ್ಣಗೊಳಿಸಿ, ಲಖನೌದ ದಾರುಲ್ ಉಲೂಮ್ ನದ್ವತುಲ್ ಉಲಮಾದಲ್ಲಿ ಫಾಝಿಲತ್ ಶಿಕ್ಷಣ ಪಡೆದ ಬಳಿಕ ಮದೀನಾ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ.






