ಯುಪಿಎಸ್‌ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಮಾರ್ಗದರ್ಶನ

ಭಟ್ಕಳ: ಭಟ್ಕಳದ ಅಂಜುಮನ್ ಆರ್ಟ್ಸ್, ಸೈನ್ಸ್ ಆ್ಯಂಡ್ ಕಾಮರ್ಸ್ ಕಾಲೇಜಿನಲ್ಲಿ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ ಹಾಗೂ ವೃತ್ತಿ ಯೋಜನೆ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಓರಿಯಂಟೇಶನ್ ಕಾರ್ಯಕ್ರಮ ಇತ್ತೀಚಿಗೆ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾಲೇಜಿನ ಸ್ಟೂಡೆಂಟ್ ವೆಲ್ಫೇರ್ ವಿಂಗ್, ರಾಬಿತಾ ಸೊಸೈಟಿ ಹಾಗೂ ಎಸ್ ಅಕಾಡೆಮಿ, ಮಂಗಳೂರು ಸಹಯೋಗ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಎ, ಬಿಕಾಂ ಮತ್ತು ಬಿಎಸ್ಸಿಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಭಟ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಾನು ಗುಪ್ತಾ, ಐಪಿಎಸ್, ಮಾತನಾಡಿ, ನಾಗರಿಕ ಸೇವೆಗೆ ತಾವು ಆಯ್ಕೆಯಾದ ಅನುಭವ, ವಿವಿಧ ಸೇವೆಗಳ ಅರ್ಹತೆ ಹಾಗೂ ಪರೀಕ್ಷಾ ಸಿದ್ಧತೆ ಕುರಿತು ಮಾಹಿತಿ ನೀಡಿದರು. ಮುಖ್ಯ ಪರೀಕ್ಷೆಯ ನಾಲ್ಕು ಸಾಮಾನ್ಯ ಅಧ್ಯಯನ ಪತ್ರಿಕೆಗಳು ಮತ್ತು ಪರೀಕ್ಷಾ ವೇಳಾಪಟ್ಟಿಯ ಬಗ್ಗೆಯೂ ವಿವರಿಸಿ ದರು. ಆಯ್ಕೆ ಪ್ರಕ್ರಿಯೆಯಲ್ಲಿ ಜಾತಿ, ಧರ್ಮ ಅಥವಾ ಸಮುದಾಯದ ಆಧಾರದ ಮೇಲೆ ತಾರತಮ್ಯ ಇರುವುದಿಲ್ಲ ಎಂದು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು.
ಎಸ್ ಅಕಾಡೆಮಿಯ ಸಹಾಯಕ ನಿರ್ದೇಶಕ ಅಮ್ಮಾರ್ ಹಸನ್ ಸೈಯದ್ ಅವರು ಪೂರ್ವಭಾವಿ, ಮುಖ್ಯ ಪರೀಕ್ಷೆ ಹಾಗೂ ವ್ಯಕ್ತಿತ್ವ ಪರೀಕ್ಷೆಯ ಹಂತಗಳು, ಅರ್ಹತೆ, ಸ್ವಯಂ ಅಧ್ಯಯನ ಮತ್ತು ತರಬೇತಿ, ದಿನಪತ್ರಿಕೆ ಓದುವಿಕೆ ಹಾಗೂ ಸಂಕ್ಷಿಪ್ತ ಟಿಪ್ಪಣಿ ತಯಾರಿಕೆಯ ಕುರಿತು ಮಾರ್ಗದರ್ಶನ ನೀಡಿದರು.
ಅಂಜುಮನ್ ಹಾಮಿಯೇ ಮುಸ್ಲಿಮೀನ್ ಅಧ್ಯಕ್ಷ ಯೂನೂಸ್ ಕಾಜಿಯಾ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಮುಷ್ತಾಕ್ ಭಾವಿಕಟ್ಟಿ ಸ್ವಾಗತಿಸಿದರು. ಪ್ರೊ. ಮೊಹಮ್ಮದ್ ಗಾನಿಮ್ ನಿರೂಪಿಸಿದರು. ಪ್ರಾಂಶುಪಾಲ ಯೂಸುಫ್ ಕೋಲಾ ವಂದಿಸಿದರು.






