ಭಟ್ಕಳ| ಸೀರತ್-ಉನ್-ನಬಿ: ತಂಝೀಮ್‌ನಿಂದ ರಸಪ್ರಶ್ನೆ, ಸೌಹಾರ್ದ ಸಂವಾದ

ಭಟ್ಕಳ: ಪ್ರವಾದಿ ಮುಹಮ್ಮದ್ (ಸ) ಅವರ ಜೀವನ, ಬೋಧನೆ ಹಾಗೂ ಸಂದೇಶಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮಜ್ಲಿಸ್-ಎ-ಇಸ್ಲಾಹ್ ವಾ ತಂಜೀಮ್ ವತಿಯಿಂದ ಸೀರತ್-ಉನ್-ನಬಿ ಅಭಿಯಾನದಡಿ ರಸಪ್ರಶ್ನೆ ಸ್ಪರ್ಧೆ, ಸೌಹಾರ್ದ ಸಂವಾದ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಂಝೀಮ್ ಪ್ರಧಾನ ಕಾರ್ಯದರ್ಶಿ ಮೌಲಾನ ಆಝೀಝುರ್‍ರಹ್ಮಾನ್ ರುಕ್ನುದ್ದೀನ್ ನದ್ವಿ ತಿಳಿಸಿದ್ದಾರೆ.
ಅವರು ಗುರುವಾರ ಸಂಜೆ ತಂಝೀಮ್ ಕಾರ್ಯಲಯದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಸೀರತುನ್ನಬಿ ಅಭಿಯಾನದ ಕುರಿತು ಮಾಹಿತಿ ನೀಡಿದರು.
ನಗರ ಮಟ್ಟದ ಬರಹ ರೂಪದ ರಸಪ್ರಶ್ನೆ ಸ್ಪರ್ಧೆಯಲ್ಲಿ 9 ವರ್ಷ ಮೇಲ್ಪಟ್ಟ ಪುರುಷರು, ಮಹಿಳೆಯರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದು. ಒಂದು ಕುಟುಂಬದಿಂದ ಗರಿಷ್ಠ ಮೂವರು ಸ್ಪರ್ಧಿಗಳಿಗೆ ಅವಕಾಶವಿದ್ದು, ಪ್ರಶ್ನೆಪತ್ರಿಕೆಗಳನ್ನು ಅ.1ರಿಂದ 8ರ ರಾತ್ರಿ 9 ಗಂಟೆಯೊಳಗೆ ತಂಜೀಮ್ ಕಚೇರಿ ಅಥವಾ ಶಾಲಾ-ಕಾಲೇಜುಗಳಿಂದ ಪಡೆದು, ಭರ್ತಿ ಮಾಡಿ ಸಲ್ಲಿಸಬೇಕು ಎಂದು ಅವರು ತಿಳಿಸಿದರು.
ವಿಜೇತರಿಗೆ ಪ್ರಥಮ 15 ಸಾವಿರ, ದ್ವಿತೀಯ 10 ಸಾವಿರ ಹಾಗೂ ತೃತೀಯ 5 ಸಾವಿರ ನಗದು ಬಹುಮಾನ ನೀಡಲಾಗುವುದು. 25 ಮಂದಿಗೆ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಗುವುದು.
ಸೌಹಾರ್ದ ಸಂವಾದ: ವಿವಿಧ ಕ್ಷೇತ್ರಗಳ ಪ್ರಮುಖರ ನಡುವೆ ಸೌಹಾರ್ದ ಮತ್ತು ಬಾಂಧವ್ಯ ಬೆಳೆಸುವ ಉದ್ದೇಶ ದಿಂದ ಅ.18ರಂದು ಬೆಳಿಗ್ಗೆ 11.30ರಿಂದ ಮಧ್ಯಾಹ್ನ 2ರವರೆಗೆ ಜಾಲಿ ರಸ್ತೆಯ ಕೋಕೋಸ್ ರೆಸೋರ್ಟನಲ್ಲಿ ಸೌಹಾರ್ದ ಸಂವಾದ ಆಯೋಜಿಸಲಾಗಿದೆ. ಭಟ್ಕಳದ ನೂತನ ಎಎಸ್‌ಪಿ ಹಾಗೂ ವಾರ್ತಾಭಾರತಿ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಕೀಲರು, ವೈದ್ಯರು, ಬ್ಯಾಂಕ್ ವ್ಯವಸ್ಥಾಪಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಅಕ್ಟೋಬರ್ ಕೊನೆಯ ವಾರದಲ್ಲಿ ನಗರದ ಸಾರ್ವಜನಿಕ ಚಬುತ್ರಾದಲ್ಲಿ ಸೀರತ್ ಅಭಿಯಾನದ ಸಮಾರೋಪ ಸಮಾರಂಭ ನಡೆಯಲಿದ್ದು, ಉಲೇಮಾಗಳ ಉಪನ್ಯಾಸ ಹಾಗೂ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.






