ಕಸ್ತೂರಿರಂಗನ್ ವರದಿ, ಅರಣ್ಯ ಹಕ್ಕು ವಿಚಾರದಲ್ಲಿ ಬಿಜೆಪಿ ಅಪಪ್ರಚಾರ: ಕಾಂಗ್ರೆಸ್ ಆರೋಪ

ಭಟ್ಕಳ: ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಕಸ್ತೂರಿರಂಗನ್ ವರದಿ, ಅರಣ್ಯ ಭೂಮಿ ಹಕ್ಕು ಹಾಗೂ ಮನೆ ತೆರಿಗೆ ವಿಚಾರದಲ್ಲಿ ಬಿಜೆಪಿ ಮುಖಂಡರು ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಆರೋಪಿಸಿದರು.
ಮಂಗಳವಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಅರಣ್ಯವಾಸಿಗಳ ಹಕ್ಕುಗಳ ಪರ ಧ್ವನಿ ಎತ್ತದ ಬಿಜೆಪಿ ಮುಖಂಡರು ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಜನರ ಮುಂದೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ದೂರಿದರು.
ಕಸ್ತೂರಿರಂಗನ್ ವರದಿ: ಭಟ್ಕಳ ತಾಲೂಕಿನ ಸುಮಾರು 25 ಗ್ರಾಮಗಳು ಕಸ್ತೂರಿರಂಗನ್ ವರದಿ ವ್ಯಾಪ್ತಿಯಲ್ಲಿದ್ದು, ಸಾವಿರಾರು ಕುಟುಂಬಗಳ ಮನೆ, ಆಸ್ತಿ ಹಾಗೂ ಜೀವನೋಪಾಯದ ಬಗ್ಗೆ ಆತಂಕವಿದೆ. ವಿಧಾನಸಭೆಯಲ್ಲಿ ಉಪ ಸಭಾಧ್ಯಕ್ಷ ಮಂಕಾಳ ವೈದ್ಯ ಅವರು ವರದಿಯನ್ನು ಪರಿಶೀಲಿಸುವ ಬದಲು ಸಂಪೂರ್ಣ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ್ ಹಾಗೂ ದೇಶಪಾಂಡೆ ಅವರು ಕೂಡ ಈ ವಿಚಾರದಲ್ಲಿ ಧ್ವನಿ ಎತ್ತಿದ್ದಾರೆ. ಆದರೆ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮಾಜಿ ಶಾಸಕ ಸುನಿಲ್ ನಾಯ್ಕ ಅವರು ಕೇಂದ್ರದ ಮೇಲೆ ಒತ್ತಡ ಹೇರದೆ ಜನರ ದಿಕ್ಕು ತಪ್ಪಿಸುವ ಪ್ರಚಾರ ನಡೆಸುತ್ತಿದ್ದಾರೆ ಎಂದು ವೆಂಕಟೇಶ ನಾಯ್ಕ ಆರೋಪಿಸಿದರು.
ಅರಣ್ಯ ಭೂಮಿ ಹಕ್ಕು: 2006ರಲ್ಲಿ ಯುಪಿಎ ಸರ್ಕಾರ ಅರಣ್ಯ ಪ್ರದೇಶದಲ್ಲಿ ವಾಸಿಸುವ ಅರ್ಹ ಜನರಿಗೆ ಹಕ್ಕುಪತ್ರ ನೀಡುವ ಕಾಯ್ದೆ ಜಾರಿಗೆ ತಂದಿತ್ತು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕಾಗೋಡು ತಿಮ್ಮಪ್ಪ ಹಾಗೂ ಶಾಸಕ ಮಂಕಾಳ ವೈದ್ಯ ಅವರ ಪ್ರಯತ್ನದಿಂದ ಭಟ್ಕಳದಲ್ಲಿ ಸಲ್ಲಿಕೆಯಾಗಿದ್ದ 8,597 ಅರ್ಜಿಗಳ ಪೈಕಿ ಪರಿಶಿಷ್ಟ ಪಂಗಡದವರು ಹಾಗೂ 101 ಶಾಲೆ, ಸ್ಮಶಾನ ಮತ್ತು ಸಮುದಾಯ ಭವನಗಳಿಗೆ ಹಕ್ಕುಪತ್ರ ನೀಡಲಾಗಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಅರಣ್ಯ ಭೂಮಿಯಲ್ಲಿನ ಮನೆಗಳ ತೆರಿಗೆ ರದ್ದುಪಡಿಸಿ ಮನೆಗಳನ್ನು ತೆರವುಗೊಳಿಸಲು ಮುಂದಾಗಿದೆ ಎಂಬ ಬಿಜೆಪಿ ಆರೋಪ ಸುಳ್ಳು. ಅರಣ್ಯ ಭೂಮಿಯಲ್ಲಿ ವಾಸಿಸುವ ಬಡವರ ಯಾವುದೇ ಮನೆಯನ್ನು ತೆರವುಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.
ಎಸ್‌ಐಆರ್ ಕುರಿತು ಆರೋಪ: ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳು ಸಮೀಪಿಸುತ್ತಿ ರುವ ಹಿನ್ನೆಲೆಯಲ್ಲಿ ಬಿಜೆಪಿ ಅಪಪ್ರಚಾರ ನಡೆಸುತ್ತಿದೆ. ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ವೇಳೆ ‘ಫಾರ್ಮ್–7’ ದುರುಪಯೋಗಪಡಿಸಿಕೊಂಡು ಅರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪಗಳಿದ್ದು, ಇದನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಲಿದೆ ಎಂದು ಮುಖಂಡರು ಹೇಳಿದರು.
ಕಸ್ತೂರಿರಂಗನ್ ವರದಿಯಿಂದ ಜಿಲ್ಲೆಯ ಜನರನ್ನು ರಕ್ಷಿಸಲು ಕಾಂಗ್ರೆಸ್ ಬದ್ಧವಾಗಿದ್ದು, ಬಿಜೆಪಿ ಅಪಪ್ರಚಾರಕ್ಕೆ ಜನರು ಮರುಳಾಗಬಾರದು ಎಂದು ಅವರು ಮನವಿ ಮಾಡಿದರು.






