ಬಿಬಿಎ ಪರೀಕ್ಷೆ: ಅಂಜುಮನ್ ಕಾಲೇಜಿನ ಮೂವರು ವಿದ್ಯಾರ್ಥಿನಿಯರಿಗೆ ರ್ಯಾಂಕ್

ಭಟ್ಕಳ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ನಡೆಸಿದ ಬಿ.ಬಿ.ಎ. ಪರೀಕ್ಷೆಯಲ್ಲಿ ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಐಎಂಸಿಎ) ಕಾಲೇಜಿನ ಮೂವರು ವಿದ್ಯಾರ್ಥಿನಿಯರು ರ್ಯಾಂಕ್ ಗಳಿಸಿದ್ದಾರೆ.
ಕಾಲೇಜಿನ ರಿಹಾಬ್ ಅವರು 4,300 ಅಂಕಗಳಿಗೆ 4,015 ಅಂಕಗಳನ್ನು (ಶೇ. 93.37) ಗಳಿಸಿ ವಿಶ್ವವಿದ್ಯಾಲಯಕ್ಕೆ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ.
ಅಲ್ ರಿಫಾ ಅವರು 3,969 ಅಂಕಗಳನ್ನು (ಶೇ. 92.30) ಗಳಿಸಿ ಆರನೇ ರ್ಯಾಂಕ್ ಪಡೆದರೆ, ಹುರಬಿ ಅವರು 3,967 ಅಂಕಗಳನ್ನು (ಶೇ. 92.26) ಗಳಿಸಿ ಏಳನೇ ರ್ಯಾಂಕ್ ಗಳಿಸಿದ್ದಾರೆ.
ಒಂದೇ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿನಿಯರು ವಿಶ್ವವಿದ್ಯಾಲಯ ಮಟ್ಟದ ರ್ಯಾಂಕ್ ಗಳಿಸಿರುವುದರಿಂದ ಕಾಲೇಜಿನ ಸಾಧನೆಗೆ ಮತ್ತೊಂದು ಗರಿ ಮೂಡಿದಂತಾಗಿದೆ. ಇದರೊಂದಿಗೆ ಕಾಲೇಜು ಈವರೆಗೆ ಗಳಿಸಿದ ವಿಶ್ವವಿದ್ಯಾಲಯದ ರ್ಯಾಂಕ್ಗಳ ಸಂಖ್ಯೆ 21ಕ್ಕೆ ಏರಿದೆ.
ವಿದ್ಯಾರ್ಥಿನಿಯರ ಸಾಧನೆಗೆ ಅಂಜುಮನ್ ಹಾಮಿ-ಎ-ಮುಸ್ಲಿಮೀನ್ ಸಂಸ್ಥೆಯ ಆಡಳಿತ ಮಂಡಳಿ, ಕಾಲೇಜಿನ ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.




