ಮುಂಬೈಯಲ್ಲಿ ರಸ್ತೆ ಅಪಘಾತ: ಭಟ್ಕಳದ ಶಕೀಲ್ ಶಾಬಂದ್ರಿ ಮೃತ್ಯು

ಭಟ್ಕಳ: ಮುಂಬೈನ ದಾದರ್ ಪ್ರದೇಶದಲ್ಲಿ ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭಟ್ಕಳದ ನಿವಾಸಿ ಶಕೀಲ್ ಶಾಬಂದ್ರಿ (58) ಮೃತಪಟ್ಟಿದ್ದಾರೆ.
ಸ್ಕೂಟರ್ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರು ರಾತ್ರಿ ಸುಮಾರು 10 ಗಂಟೆಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಭಟ್ಕಳ ಮುಸ್ಲಿಂ ಜಮಾಅತ್ ಮುಂಬೈನ ಸಕ್ರಿಯ ಸದಸ್ಯ ಕಮರುಝ್ಝಮಾ ಮೊಟಿಯಾ ಅವರ ಮಾಹಿತಿ ಪ್ರಕಾರ, ಶಕೀಲ್ ಅವರು ಸೋಮವಾರ ಮಧ್ಯಾಹ್ನ ಸ್ಕೂಟರ್ನಲ್ಲಿ ಸಂಚರಿಸುತ್ತಿದ್ದಾಗ ಮತ್ತೊಂದು ವಾಹನ ಢಿಕ್ಕಿ ಹೊಡೆದಿದೆ. ಇದರಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಅವರ ಕಾಲಿನ ಮೇಲೆ ಲಾರಿಯೊಂದು ಹರಿದಿದೆ ಎನ್ನಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತದೇಹವನ್ನು ಮುಂಬೈನ ಬೆಂಡಿ ಬಜಾರ್ನ ನಖುದಾ ಮೊಹಲ್ಲಾದಲ್ಲಿರುವ ನೂರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮೃತದೇಹವನ್ನು ಭಟ್ಕಳಕ್ಕೆ ತರಲು ಭಟ್ಕಳ ಮುಸ್ಲಿಂ ಜಮಾಅತ್ ಮುಂಬೈನ ಪದಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಕಮರುಝ್ಝಮಾನ್ ಮೊಟಿಯಾ ತಿಳಿಸಿದ್ದಾರೆ.




