ಭಟ್ಕಳ | ಟೆಂಪೊ ಟ್ರಾವೆಲರ್ ಕಳವು ಪ್ರಕರಣ: ಆರೋಪಿ ಸೆರೆ

ಭಟ್ಕಳ: ಕಳೆದ ಕೆಲ ವಾರಗಳ ಹಿಂದೆ ಇಲ್ಲಿನ ಮಣ್ಕುಳಿ ಬಳಿ ನಿಲ್ಲಿಸಿದ್ದ ಟೆಂಪೊ ಟ್ರಾವೆಲರ್ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಪಟ್ಟಣ ಪೊಲೀಸರು ಶಿವಮೊಗ್ಗದ 32 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಕಳವು ಮಾಡಿದ್ದ ವಾಹನವನ್ನು ಕೊಲ್ಲೂರು, ಶಿವಮೊಗ್ಗ ಮತ್ತು ಚಿತ್ರದುರ್ಗ ಮಾರ್ಗವಾಗಿ ಆಂಧ್ರಪ್ರದೇಶದ ಅನಂತಪುರಕ್ಕೆ ಕೊಂಡೊಯ್ಯಲಾಗಿದೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಬಂಧಿತನನ್ನು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಸಾಹಿಲ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ನೀಡಲಾಗಿದೆ.
ಈ ಕುರಿತು ಮುಂಡಳ್ಳಿಯ ನೀರಗದ್ದೆಯ ಕೃಷ್ಣ ಅನಂತ ನಾಯ್ಕ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ಬಂಧಿತ ಆರೋಪಿ ಬೈಕ್, ಕಾರು ಹಾಗೂ ಟೆಂಪೊ ಟ್ರಾವೆಲರ್‌ಗಳ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾನೆ. ರಾಮನಗರ, ಬೆಂಗಳೂರು ಮತ್ತು ಶಿವಮೊಗ್ಗ ಸೇರಿದಂತೆ ವಿವಿಧೆಡೆ ಆತನ ವಿರುದ್ಧ ವಾಹನ ಕಳವಿಗೆ ಸಂಬಂಧಿಸಿದ 12 ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.
ಇತ್ತೀಚೆಗೆ ಚಿಕ್ಕೋಡಿಯಲ್ಲಿ ಕಾರು ಕಳವು ಮಾಡಿದ ಪ್ರಕರಣದಲ್ಲಿ ಬಂಧಿತನಾಗಿದ್ದ ಸಾಹಿಲ್‌ನನ್ನು ಜೈಲಿಗೆ ಕಳುಹಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಭಟ್ಕಳದಲ್ಲಿ ಟೆಂಪೊ ಟ್ರಾವೆಲರ್ ಕಳವು ಮಾಡಿರುವ ಆರೋಪ ಎದುರಿಸುತ್ತಿದ್ದಾನೆ. ಕರಾವಳಿ ಪ್ರದೇಶದಲ್ಲಿ ವಾಹನ ಕಳವು ಪ್ರಕರಣದಲ್ಲಿ ಆತನ ಹೆಸರು ಕೇಳಿಬಂದಿರುವುದು ಇದೇ ಮೊದಲ ಬಾರಿ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಭಟ್ಕಳದಿಂದ ಕಳವು ಮಾಡಿದ್ದ ವಾಹನವನ್ನು ಕೊಲ್ಲೂರು ಮಾರ್ಗವಾಗಿ ಶಿವಮೊಗ್ಗದ ಸಮೀಪದ ಆಯನೂರಿಗೆ ಕೊಂಡೊಯ್ದ ಆರೋಪಿ, ಅಲ್ಲಿ ವಾಹನದ ನೋಂದಣಿ ಫಲಕವನ್ನು ಬದಲಾಯಿಸಿದ್ದಾನೆ. ಬಳಿಕ ಚಿತ್ರದುರ್ಗ ಮಾರ್ಗವಾಗಿ ಆಂಧ್ರಪ್ರದೇಶದ ಅನಂತಪುರಕ್ಕೆ ತೆರಳಿದ್ದಾನೆ ಎನ್ನಲಾಗಿದೆ.
ಅನಂತಪುರದಲ್ಲಿ ವಾಹನವನ್ನು ಯಾರು ಖರೀದಿಸಿದ್ದಾರೆ ಅಥವಾ ಯಾರಿಗೆ ಹಸ್ತಾಂತರಿಸಲಾಗಿದೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ಕಳವಾದ ವಾಹನವನ್ನು ಪತ್ತೆಹಚ್ಚಲು ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಇತರರ ಗುರುತು ಪತ್ತೆ ಮಾಡಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






