ʼಮೀಫ್ʼ ಉತ್ತರ ಕನ್ನಡ ಘಟಕ ಉದ್ಘಾಟನೆ

ಮಂಗಳೂರು, ಅ.28: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಕೇಂದ್ರ ಸಮಿತಿಯ ನೂತನ ಮೀಫ್ ಉತ್ತರ ಕನ್ನಡ ಘಟಕ ಬುಧವಾರದಂದು ಶಿರಸಿಯ ಅಂಬೆಡ್ಕರ್ ಭವನದಲ್ಲಿ ಉದ್ಘಾಟನೆಗೊಂಡಿತು.
ಶಿರಸಿ ಉಪವಿಭಾಗದ ಉಪ ಪೊಲೀಸ್ ಅಧೀಕ್ಷಕ ಗೀತಾ ಪಾಟಿಲ್ ಉದ್ಘಾಟನೆ ನೆರೆವೇರಿಸಿ ಮಾತನಾಡಿ ಸಮಾಜ ದಲ್ಲಿ ಶಾಂತಿ ಕಾಪಾಡುವುದು ಪೊಲೀಸ್ ಇಲಾಖೆಯ ಕರ್ತವ್ಯವಾದರೆ, ಸಮಾಜವನ್ನು ಉತ್ತಮ ನಾಗರೀಕರ ನ್ನಾಗಿಸುವುದು ಪೋಷಕರ ಜೊತೆ ಶಿಕ್ಷಕರ ಪಾತ್ರವು ಅತ್ಯಂತ ಪ್ರಮುಖವಾಗಿದೆ ಎಂದರು.
ಮೀಫ್ ಕೇಂದ್ರ ಸಮಿತಿಯ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಮಾತನಾಡಿ ‘ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಹೆಚ್ಚಿಸಲು ಮೀಫ್ ಹಮ್ಮಿಕೊಂಡ ವಿವಿಧ ಯೋಜನೆಗಳನ್ನು ಹಾಗೂ ಉನ್ನತ ವಿದ್ಯಾಭ್ಯಾಸಕ್ಕಾಗಿ ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಮೀಫ್ ನೀಡುತ್ತಿರುವ ಪ್ರೋತ್ಸಾಹವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮೀಫ್ ಉತ್ತರ ಕನ್ನಡ ಘಟಕದ ಡಾ. ಮಹಬೂಬ್ ಮುಲ್ಲಾ ಮಾತನಾಡಿ‘ ಕೇಂದ್ರ ಸಮಿತಿ ಮಂಗಳೂರಿನಿಂದ ನಮಗೆ ದೊರೆತ ಸಹಕಾರ ಮತ್ತು ಮಾರ್ಗದರ್ಶನವನ್ನು ಸ್ಮರಿಸಿದರು. ಉತ್ತರ ಕನ್ನಡ ಜಿಲ್ಲೆಯ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಮೀಫ್ ನಿರಂತರವಾಗಿ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ ವಾಗಿದೆ ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮೀಫ್ ಶಾಲೆಗಳ ಪ್ರಾಥಮಿಕ , ಪ್ರೌಢಶಾಲಾ ಮತ್ತು ಎಸ್ಎಸ್ಎಲ್ಸಿ ಶಿಕ್ಷಕರಿಗಾಗಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.ಪ್ರಾಥಮಿಕ ,ಪ್ರೌಢಶಾಲಾ ಮತ್ತು ಎಸ್ಎಸ್ಎಲ್ಸಿ ಶಿಕ್ಷಕರಿಗಾಗಿ ಆಯೋಜಿಸಲಾದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕಾರ್ಕಳದ ನ್ಯಾಷನಲ್ ಟ್ರೈನರ್ ಪ್ರೊ. ರಾಜೇಂದ್ರ ಭಟ್ ಅವರು ಶಿಕ್ಷಕರಿಗೆ ಪರಿಣಾಮಕಾರಿ ಬೋಧನಾ ವಿಧಾನಗಳು, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣದ ಕುರಿತು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಭಟ್ಕಳ ಅಂಜುಮನ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಶಾಕ್ ಶಬಂದರಿ, ಪ್ರಧಾನ ಕಾರ್ಯದರ್ಶಿ, ಭಟ್ಕಳ, ಉತ್ತರ ಕನ್ನಡ ಘಟಕದ ಗೌರವಾಧ್ಯಕ್ಷ ಅಬ್ದುಲ್ ಕರೀಮ್ ಎಚ್.ಕೆ.ಎಚ್, ಕೇಂದ್ರ ಸಮಿತಿಯ ಸಂಚಾಲಕರಾದ ಬಿ.ಎ. ಇಕ್ಬಾಲ್ ಮತ್ತು ಅಝೀಜ್ ಅಂಬರ್‌ವಾಲಿ ಭಾಗವಹಿಸಿದ್ದರು.
ಶಿರಸಿ ಮಾರಿಕಂಬ ಜೂನಿಯರ್ ಕಾಲೇಜಿನ ಉಪನ್ಯಾಸಕ ಅಶ್ರಫ್ ಸ್ವಾಗತಿಸಿ, ಬನವಾಸಿ ಈಡನ್ ವೆ ಶಾಲೆಯ ವನಿತಾ ನಾಯಕ್ ವಂದಿಸಿದರು. ಮೀಫ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಅಹ್ಮದ್ ಕೆ.ಬಿ. ಕಾರ್ಯಕ್ರಮ ನಿರ್ವಹಿಸಿದರು. ಉತ್ತರ ಕನ್ನಡ ಜಿಲ್ಲೆಯ ವಿವಿಧ ಮೀಫ್ ವಿದ್ಯಾ ಸಂಸ್ಥೆಗಳ 160 ಕ್ಕೂ ಹೆಚ್ಚು ಶಿಕ್ಷಕಿಯರು ಮತ್ತು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮೀಫ್ ಉತ್ತರ ಕನ್ನಡ ಘಟಕದ ಪ್ರಥಮ ಕಾರ್ಯಕಾರಿ ಸಮಿತಿ ಸಭೆಯು ಜರಗಿ, ಶೈಕ್ಷಣಿಕ ಅಭಿವೃದ್ಧಿ ಬಗೆಗೆ ಹಲವು ಮಹತ್ವದ ಯೋಜನೆಗಳನ್ನು ಚರ್ಚಿಸಲಾಯಿತು.
ಏಳು ಜಿಲ್ಲೆಗಳಿಗೆ ವಿಸ್ತರಣೆ: ಇದೀಗ ಮೀಫ್ ತನ್ನ ಕಾರ್ಯ ವ್ಯಾಪ್ತಿಯನ್ನು ದ.ಕ., ಉಡುಪಿ, ಜಿಲ್ಲೆಗಳ ಜೊತೆ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ,ಹಾಸನ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ವಿಸ್ತರಿಸಿದೆ.
ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಮೀಫ್ ಉತ್ತರ ಕನ್ನಡ ಘಟಕ ಮತ್ತು ಶಿರಸಿ ತಾಲ್ಲೂಕು ಅಲ್ಪಸಂಖ್ಯಾತರ ಶಿಕ್ಷಣ ಮತ್ತು ಕಲ್ಯಾಣ ಟ್ರಸ್ಟ್ ವಹಿಸಿತ್ತು.






