ಭಟ್ಕಳದಲ್ಲಿ ವಿಜೃಂಭಣೆಯ ಕನ್ನಡ ರಾಜ್ಯೋತ್ಸವ ಆಚರಣೆ

ಭಟ್ಕಳ : ತಾಲೂಕು ಆಡಳಿತ ಹಾಗೂ ವಿವಿಧ ಕನ್ನಡ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಭಟ್ಕಳದಲ್ಲಿ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಭವ್ಯ ಮೆರವಣಿಗೆ, ಕನ್ನಡ ನಾಡು-ನುಡಿಯ ಮಹತ್ವ ಸಾರುವ ಭಾಷಣ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.
ಸಮಾರಂಭದಲ್ಲಿ ಮುಖ್ಯ ದಿಕ್ಸೂಚಿ ಭಾಷಣ ಮಾಡಿದ ನ್ಯಾಯವಾದಿ ಧನ್ಯಕುಮಾರ್ ಜೈನ್ ಅವರು, ಕನ್ನಡ ರಾಜ್ಯೋತ್ಸವವು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ, ಭಾಷೆಯ ಸಂರಕ್ಷಣೆ, ಐತಿಹಾಸಿಕ ಪರಂಪರೆ ಹಾಗೂ ಸಂವಿಧಾನಾತ್ಮಕ ಹಕ್ಕುಗಳ ಅರಿವು ಮೂಡಿಸುವ ವೇದಿಕೆಯಾಗಬೇಕು ಎಂದು ಹೇಳಿದರು.
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಸಮೃದ್ಧ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪರಂಪರೆ ಯನ್ನು ಹೊಂದಿದೆ. ಇತರ ಭಾಷಿಕರೂ ಕನ್ನಡದ ಹಿರಿಮೆಯನ್ನು ಒಪ್ಪಿಕೊಂಡಿದ್ದಾರೆ. ಇಂತಹ ಶ್ರೀಮಂತ ಭಾಷೆ ಮತ್ತು ಪರಂಪರೆಯುಳ್ಳ ಕರ್ನಾಟಕದಲ್ಲಿ ಜನಿಸಿರುವುದು ನಮ್ಮೆಲ್ಲರ ಭಾಗ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹಾಗೂ ವಿಧಾನಸಭಾ ಉಪಸಭಾಪತಿ ಮಂಕಾಳ್ ಎಸ್.ವೈದ್ಯ ವಹಿಸಿದ್ದರು.
ಭಟ್ಕಳ ಉಪವಿಭಾಗಾಧಿಕಾರಿ ಜಿ.ಮಹೇಶ್ ದ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಸಂದೇಶ ನೀಡಿದರು. ತಾ.ಪಂ ಕಾರ್ಯನಿರ್ವಾಣಾಧಿಕಾರಿ ಸುನಿಲ್ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ್ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ, ಭಟ್ಕಳ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಜು ನಾಯ್ಕ ಸೇರಿದಂತೆ ಇತರರು ವೇದಿಕೆಯಲ್ಲಿ ಇದ್ದರು. ಶಿಕ್ಷಕ ಶ್ರೀಧರ್ ಶೇಟ್ ಶಿರಾಲಿ ಕರ್ಯಕ್ರಮ ನಿರೂಪಿಸಿದರು.
ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ತಾಲೂಕು ಆಡಳಿತದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಐವರು ಸಾಧಕರಿಗೆ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೈದ್ಯಕೀಯ ಹಾಗೂ ಸಮಾಜಸೇವಾ ಕ್ಷೇತ್ರದ ಡಾ. ಲಿಂಗಪ್ರಸಾದ್, ಯಕ್ಷಗಾನ ಕಲಾವಿದ ದೇವಡಿಗ, ಸಾಹಿತ್ಯ ಮತ್ತು ನಾಟಕ ಕ್ಷೇತ್ರದ ಭಾಸ್ಕರ್ ನಾಯ್ಕ , ಸಂಗೀತ ಹಾಗೂ ಗಾಯನ ಕ್ಷೇತ್ರದ ಎಸ್.ಎನ್. ನಾಯ್ಕ ಮತ್ತು ಪತ್ರಿಕೋದ್ಯಮ ಹಾಗೂ ಸಂಘಟನಾ ಕ್ಷೇತ್ರದ ಸತೀಶ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವ ಮೂಲಕ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಕುರಿತ ಅಭಿಮಾನವನ್ನು ಬಲಪಡಿಸುವ ಸಂದೇಶವನ್ನು ಸಮಾರಂಭ ಸಾರಿತು.






