ಖಿದ್ವಾಯಿ ಕ್ರಾಸ್ನಲ್ಲಿ ಅಂಡರ್ಪಾಸ್ ನಿರ್ಮಾಣಕ್ಕೆ ಒತ್ತಾಯ: ಅಪಘಾತ ಸ್ಥಳಕ್ಕೆ ಎನ್ಎಚ್ಎಐ ಯೋಜನಾ ನಿರ್ದೇಶಕ ಭೇಟಿ

ಭಟ್ಕಳ: ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಸ್ಕೂಟರ್ ಸವಾರನಿಗೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಬಳಿಕ, ಭಟ್ಕಳದ ಖಿದ್ವಾಯಿ ಕ್ರಾಸ್ನಲ್ಲಿ ಅಂಡರ್ಪಾಸ್ ನಿರ್ಮಿಸಬೇಕೆಂಬ ಸಾರ್ವಜನಿಕರ ಒತ್ತಾಯ ತೀವ್ರಗೊಂಡಿದೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಯೋಜನಾ ನಿರ್ದೇಶಕ ಶಿವಕುಮಾರ್ ಅವರು ಮಂಗಳವಾರ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳ ಅಹವಾಲು ಮತ್ತು ಸಲಹೆಗಳನ್ನು ಆಲಿಸಿದರು.
ಮಜ್ಲಿಸ್-ಎ-ಇಸ್ಲಾಹ್-ವ-ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಹಾಗೂ ಪ್ರಧಾನ ಕಾರ್ಯದರ್ಶಿ ಅಝೀಝುರ್ರಹ್ಮಾನ್ ರುಕ್ನುದ್ದೀನ್ ನದ್ವಿ ಅವರು, ಖಿದ್ವಾಯಿ ಕ್ರಾಸ್ನಿಂದ ರೈಲು ನಿಲ್ದಾಣ ಹಾಗೂ ಗುಲ್ಮಿಗೆ ತೆರಳಲು ರಾಷ್ಟ್ರೀಯ ಹೆದ್ದಾರಿ ದಾಟಬೇಕಾದ ಅನಿವಾರ್ಯತೆ ಇದೆ. ಈ ಭಾಗದಲ್ಲಿ ವಾಹನ ಸಂಚಾರ ಹೆಚ್ಚಿರುವುದರಿಂದ ರಸ್ತೆ ದಾಟುವುದು ಅಪಾಯಕಾರಿಯಾಗಿದೆ. ಅಪಘಾತಗಳನ್ನು ತಡೆಯಲು ಇಲ್ಲಿ ಅಂಡರ್ಪಾಸ್ ನಿರ್ಮಿಸುವುದು ಅಗತ್ಯ ಎಂದು ಮನವಿ ಮಾಡಿದರು.
ಖಿದ್ವಾಯಿ ರಸ್ತೆ, ಉಸ್ಮಾನ್ ನಗರ ಹಾಗೂ ಗುಲ್ಮಿ ನಿವಾಸಿಗಳು ಅಂಡರ್ಪಾಸ್ ನಿರ್ಮಾಣಕ್ಕಾಗಿ ಹಲವು ಬಾರಿ ಎನ್ಎಚ್ಎಐಗೆ ಮನವಿ ಸಲ್ಲಿಸಿದ್ದರೂ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಅಝೀಝುರ್ರಹ್ಮಾನ್ ನದ್ವಿ ತಿಳಿಸಿದರು. ಈ ಹಿಂದೆ ಸಲ್ಲಿಸಿದ್ದ ಮನವಿಯ ಪ್ರತಿಯನ್ನೂ ಯೋಜನಾ ನಿರ್ದೇಶಕರಿಗೆ ಹಸ್ತಾಂತರಿಸಿದರು.
ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ನಾಯ್ಕ ಮಾತನಾಡಿ, ಈ ಪ್ರದೇಶದಲ್ಲಿ ವಾಹನಗಳ ದಟ್ಟಣೆ ಹೆಚ್ಚಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ಹೆದ್ದಾರಿ ದಾಟುವುದು ಜೀವಕ್ಕೆ ಅಪಾಯ ತಂದೊಡ್ಡುತ್ತಿದೆ. ಅಂಡರ್ಪಾಸ್ ನಿರ್ಮಾಣದ ಬೇಡಿಕೆಯನ್ನು ತುರ್ತಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಯೋಜನಾ ನಿರ್ದೇಶಕ ಶಿವಕುಮಾರ್, ಅಂಡರ್ಪಾಸ್ ನಿರ್ಮಾಣದ ಪ್ರಸ್ತಾವನೆ ಪರಿಗಣಿಸಲು ಈ ಸ್ಥಳವನ್ನು ಅಧಿಕೃತವಾಗಿ ಅಪಘಾತದ ಬ್ಲ್ಯಾಕ್ಸ್ಪಾಟ್ ಎಂದು ಗುರುತಿಸುವ ಅಗತ್ಯವಿದೆ ಎಂದರು. ಈ ಕುರಿತು ಎನ್ಎಚ್ಎಐಗೆ ವಿಶೇಷ ಪತ್ರ ಬರೆಯುವುದಾಗಿ ಭಟ್ಕಳ ಡಿವೈಎಸ್ಪಿ ಗಿರೀಶ್ ಭರವಸೆ ನೀಡಿದರು.
ಅಂಡರ್ಪಾಸ್ ನಿರ್ಮಾಣಕ್ಕೆ ಮೇಲಧಿಕಾರಿಗಳ ಅನುಮತಿ ಪಡೆಯಲು ಸಮಯ ಬೇಕಾಗಬಹುದು. ಅಲ್ಲಿಯವರೆಗೆ ತಾತ್ಕಾಲಿಕ ಸುರಕ್ಷತಾ ಕ್ರಮವಾಗಿ ವೇಗ ನಿಯಂತ್ರಕಗಳನ್ನು ಅಳವಡಿಸುವುದು, ಜೀಬ್ರಾ ಕ್ರಾಸಿಂಗ್, ಸಂಚಾರ ದೀಪ ಹಾಗೂ ಸೂಕ್ತ ದಿಕ್ಸೂಚಿ ಫಲಕಗಳನ್ನು ಸ್ಥಾಪಿಸಬೇಕು ಎಂದು ಸತೀಶ್ ಕುಮಾರ್ ನಾಯ್ಕ ಒತ್ತಾಯಿಸಿದರು.
ಹೆದ್ದಾರಿ ಕಾಮಗಾರಿ ಸಮಸ್ಯೆಗಳ ಕುರಿತು ಸಭೆ
ನಂತರ ಸರ್ಕಿಟ್ ಹೌಸ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ, ಎನ್ಎಚ್ಎಐ ಹಾಗೂ ಐಆರ್ಬಿ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಭಟ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಮೋಡ ಭಟ್ಕಳ ಬೈಪಾಸ್ನಿಂದ ತೆಂಗಿನಗುಂಡಿ ಕ್ರಾಸ್ವರೆಗೆ ಹೆದ್ದಾರಿಯುದ್ದಕ್ಕೂ ಬೀದಿ ದೀಪಗಳನ್ನು ಅಳವಡಿಸ ಬೇಕು. ರಂಗೀಕಟ್ಟೆಯಲ್ಲಿ ಅಂತ್ಯಗೊಳ್ಳುವ ಸರ್ವಿಸ್ ರಸ್ತೆಯನ್ನು ತೆಂಗಿನಗುಂಡಿ ಕ್ರಾಸ್ವರೆಗೆ ವಿಸ್ತರಿಸಬೇಕು ಎಂದು ಸತೀಶ್ ಕುಮಾರ್ ನಾಯ್ಕ ಆಗ್ರಹಿಸಿದರು.
ಅಂಜುಮನ್ ಕಾಲೇಜು ರಸ್ತೆ, ಆಸ್ಪತ್ರೆ ರಸ್ತೆ ಹಾಗೂ ನೂರ್ ಮಸೀದಿ ಮುಂಭಾಗದಲ್ಲಿ ಸೂಕ್ತ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿಯಿಂದ ಭಟ್ಕಳದ ಪೇಟೆ ಪ್ರದೇಶಕ್ಕೆ ಪ್ರವೇಶಿಸುವ ವಾಹನ ಗಳಿಂದ ಅಪಘಾತ ಸಂಭವಿಸದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ತಂಝೀಮ್ ಪ್ರತಿನಿಧಿಗಳು ಅಧಿಕಾರಿಗಳಿಗೆ ಮನವಿ ಮಾಡಿದರು.
ಭಟ್ಕಳ ಪೊಲೀಸ್ ನಿರೀಕ್ಷಕ ದಿವಾಕರ್, ಲಬ್ಬೈಕ್ ನವಾಯತ್ ಸಂಘಟನೆಯ ಪ್ರತಿನಿಧಿಗಳು, ಗುಲ್ಮಿ ಹಾಗೂ ಉಸ್ಮಾನ್ ನಗರದ ನಿವಾಸಿಗಳು, ಸ್ಥಳೀಯ ಪುರಸಭಾ ಸದಸ್ಯರು, ಗುಲ್ಮಿ ಪಂಚಾಯಿತಿ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.






