ವಾರ್ತಾಭಾರತಿ ವರದಿ ಫಲಶ್ರುತಿ| ʼಸರಾಬಿ ನದಿಗೆ ಕೊಳಚೆ ನೀರು ಹರಿವುʼ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
ತಜ್ಞರ ತಂಡ ಭೇಟಿ; ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ

ಭಟ್ಕಳ: ಘೌಸಿಯಾ ರಸ್ತೆಯ ಯುಜಿಡಿ ಪಂಪಿಂಗ್ ಸ್ಟೇಷನ್‌ನಿಂದ ಸಂಸ್ಕರಿಸದ ಕೊಳಚೆ ನೀರು ನಿರಂತರವಾಗಿ ಸರಾಬಿ ನದಿಗೆ ಹರಿಯುತ್ತಿರುವ ಕುರಿತು ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಫಲಶ್ರುತಿಯಾಗಿ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾರವಾರದಿಂದ ಆಗಮಿಸಿದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸದಾನಂದ ಅವರು, ನಗರಸಭೆ ಪೌರಾಯುಕ್ತ ಬಾಬಾಸಾಹೇಬ್ ಮಾನೆ ಹಾಗೂ ನಗರಸಭೆಯ ಇತರ ಸಿಬ್ಬಂದಿಯೊಂದಿಗೆ ಘೌಸಿಯಾ ರಸ್ತೆ ಸೇರಿದಂತೆ ಕೊಳಚೆ ನೀರಿನ ಹರಿವಿನಿಂದ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಈ ಸಂದರ್ಭ ಯುಜಿಡಿ ಪಂಪಿಂಗ್ ಸ್ಟೇಷನ್‌ನಿಂದ ಹೆಚ್ಚುವರಿ ಕೊಳಚೆ ನೀರು ಸರಾಬಿ ನದಿಗೆ ಹರಿಯಲು ಕಾರಣವೇನು? ಇದನ್ನು ತಡೆಯಲು ಯಾವ ರೀತಿಯ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಬೇಕು? ಹೆಚ್ಚಿನ ಸಾಮರ್ಥ್ಯದ ಮೋಟಾರ್ ಅಳವಡಿಸುವುದರಿಂದ ಸಮಸ್ಯೆ ಬಗೆಹರಿಯಬಹುದೇ ಅಥವಾ ಪಂಪಿಂಗ್ ವ್ಯವಸ್ಥೆಯಲ್ಲಿ ಮತ್ತಷ್ಟು ಬದಲಾವಣೆಗಳ ಅಗತ್ಯವಿದೆಯೇ ಎಂಬ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಸ್ಥಳೀಯ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವರು ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಪಡೆದುಕೊಂಡರು.
ಈ ಕುರಿತು ಮಾತನಾಡಿದ ಪೌರಾಯುಕ್ತ ಬಾಬಾಸಾಹೇಬ್ ಮಾನೆ, ಸ್ಥಳ ಪರಿಶೀಲನೆಯಲ್ಲಿ ಕಂಡುಬಂದ ಅಂಶ ಗಳು, ಸ್ಥಳೀಯ ನಿವಾಸಿಗಳ ಸಮಸ್ಯೆಗಳು ಮತ್ತು ಅವರ ಬೇಡಿಕೆಗಳ ಕುರಿತು ಸಮಗ್ರ ವರದಿಯನ್ನು ಸಿದ್ಧಪಡಿಸಿ ಕಾರವಾರದ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗುವುದು. ಅಲ್ಲದೆ, ಹೆಚ್ಚುವರಿ ಜಿಲ್ಲಾಧಿಕಾರಿಗಳ ಗಮನಕ್ಕೂ ಈ ವಿಷಯವನ್ನು ತರಲಾಗುವುದು ಎಂದು ತಿಳಿಸಿದರು.
ಮುಂದಿನ ಬುಧವಾರ ಸಂಬಂಧಪಟ್ಟ ತಾಂತ್ರಿಕ ಅಧಿಕಾರಿಗಳು ಹಾಗೂ ತಜ್ಞರ ತಂಡ ಭಟ್ಕಳಕ್ಕೆ ಆಗಮಿಸಿ ಸಮಸ್ಯೆ ಗೊಳಗಾದ ಪ್ರದೇಶಕ್ಕೆ ಭೇಟಿ ನೀಡಲಿದೆ. ಅವರು ಸ್ಥಳದ ಪರಿಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ, ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಮ್ಮ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ಅವರು ತಿಳಿಸಿದರು.
ಅಲ್ಲಿಯವರೆಗೆ ಸ್ಥಳೀಯ ನಿವಾಸಿಗಳು ಸಹಕರಿಸುವಂತೆ ಮನವಿ ಮಾಡಿದ ಪೌರಾಯುಕ್ತರು, ಸರಾಬಿ ನದಿಗೆ ಕೊಳಚೆ ನೀರು ಹರಿಯುತ್ತಿರುವ ಸಮಸ್ಯೆಯನ್ನು ಸಾಧ್ಯವಾದಷ್ಟು ಶೀಘ್ರದಲ್ಲಿ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಹಿಂದೆ ಹಲವು ಬಾರಿ ಅಧಿಕಾರಿಗಳ ಗಮನ ಸೆಳೆದರೂ ಸಮಸ್ಯೆ ಬಗೆಹರಿಯದೆ ಆತಂಕದಲ್ಲಿದ್ದ ಘೌಸಿಯಾ ಸ್ಟ್ರೀಟ್, ಮುಷ್ಮಾ ಸ್ಟ್ರೀಟ್, ಖಲೀಫಾ ಸ್ಟ್ರೀಟ್ ಹಾಗೂ ಡಾರಂಟ ಪ್ರದೇಶದ ನಿವಾಸಿಗಳಿಗೆ ಶನಿವಾರದ ಅಧಿಕಾರಿಗಳ ಭೇಟಿ ಹೊಸ ನಿರೀಕ್ಷೆ ಮೂಡಿಸಿದೆ. ಇದೀಗ ಬುಧವಾರ ಆಗಮಿಸಲಿರುವ ತಾಂತ್ರಿಕ ತಂಡದ ಪರಿಶೀಲನೆ ಹಾಗೂ ಅದರ ವರದಿಯ ಆಧಾರದ ಮೇಲೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಸ್ಥಳೀಯರು ಎದುರು ನೋಡುತ್ತಿದ್ದಾರೆ.






