ಚಿನ್ನಾಭರಣ ನಾಪತ್ತೆ: ಮನನೊಂದು ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಭಟ್ಕಳ: ಮನೆಯಲ್ಲಿದ್ದ ಸುಮಾರು 12 ತೊಲೆ ಬಂಗಾರದ ಆಭರಣಗಳು ನಾಪತ್ತೆಯಾಗಿದ್ದರಿಂದ ಮನನೊಂದ ವ್ಯಕ್ತಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ವೆಂಕಟಾಪುರದಲ್ಲಿ ನಡೆದಿದೆ.
ಮೃತರನ್ನು ಯಲ್ಲಾಪುರ ತಾಲೂಕಿನ ಹರಣಗದ್ದೆ ಮೂಲದವರಾದ, ಪ್ರಸ್ತುತ ಭಟ್ಕಳ ತಾಲೂಕಿನ ಕಾಯ್ಕಿಣಿ ಗ್ರಾಮದ ಅಗ್ಗೋಳೆ ಬಸ್ತಿಯಲ್ಲಿ ವಾಸವಾಗಿದ್ದ ದಿನೇಶ ಮೋಹನ ಮಡಿವಾಳ (42) ಎಂದು ಗುರುತಿಸಲಾಗಿದೆ.
ದಿನೇಶ ಅವರ ಮನೆಯ ಗೋದ್ರೇಜ್ ಕಪಾಟಿನಲ್ಲಿ ಸುಮಾರು 12 ತೊಲೆ ಬಂಗಾರದ ಆಭರಣಗಳನ್ನು ಇಡಲಾಗಿತ್ತು. ನವೆಂಬರ್ 7ರಂದು ಕಪಾಟು ಪರಿಶೀಲಿಸಿದಾಗ ಆಭರಣಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಇದರಿಂದ ತೀವ್ರವಾಗಿ ಮನನೊಂದಿದ್ದ ಅವರು, ನವೆಂಬರ್ 10ರಂದು ಮಧ್ಯಾಹ್ನ 2.45ರಿಂದ ರಾತ್ರಿ 8 ಗಂಟೆಯ ನಡುವಿನ ಅವಧಿಯಲ್ಲಿ ವೆಂಕಟಾಪುರದ ತಾಮ್ರ ಹೋಟೆಲ್ ಸಮೀಪದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದ ಸಿಪಿಐ ವೆಂಕಟೇಶ ಮುರ್ನಾಳ್ ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಕಾರದೊಂದಿಗೆ ಶೋಧ ಕಾರ್ಯ ನಡೆಸಿದರು. ನವೆಂಬರ್ 11ರಂದು ಬೆಳಗಿನ ಜಾವ ಸುಮಾರು 5.15ರ ವೇಳೆಗೆ ಶಿರಾಲಿ ಗ್ರಾಮದ ಮೊಗೇರಕೇರಿ ಸಮೀಪದ ವೆಂಕಟಾಪುರ ನದಿ ತೀರದಲ್ಲಿ ಮೃತದೇಹ ಪತ್ತೆಯಾಗಿದೆ.
ಈ ಕುರಿತು ಮೃತರ ಸಹೋದರ ದೀಪಕ ಮೋಹನ ಮಡಿವಾಳ ನೀಡಿದ ದೂರಿನ ಮೇರೆಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಐ ಮಲ್ಲಿಕಾರ್ಜುನ ಕೋರಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.






