ಮಕ್ಕಳ ದಿನಾಚರಣೆ: ಜಾಲಿ ಕಡಲತೀರದಲ್ಲಿ ನ್ಯೂ ಶಮ್ಸ್ ಶಾಲೆಯಿಂದ ಮ್ಯಾರಾಥಾನ್

ಭಟ್ಕಳ: ಜಾಲಿ ಕಡಲತೀರದಲ್ಲಿ ಬೀಚ್ ಮ್ಯಾರಾಥಾನ್ ನಡೆಸುವ ಮೂಲಕ ತರಬಿಯತ್ ಎಜ್ಯುಕೇಷನ್ ಸೂಸೈಟಿಯ ನ್ಯೂ ಶಮ್ಸ್ ಶಾಲೆಯ ವಿದ್ಯಾರ್ಥಿಗಳು ಶನಿವಾರ ಮಕ್ಕಳ ದಿನಾಚರಣೆಯನ್ನು ವಿನೂತನವಾಗಿ ಆಚರಿಸಿದರು.
‘ಸಣ್ಣ ಹೆಜ್ಜೆಗಳು, ದೊಡ್ಡ ಕನಸುಗಳು’ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ ಮ್ಯಾರಾಥಾನ್‌ಗೆ ಶಾಲೆಯ ಪ್ರಾಂಶುಪಾಲೆ ಫಹಮಿದಾ ದಾಟಾ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳು ಮೊಬೈಲ್ ಹಾಗೂ ಇತರ ಗ್ಯಾಜೆಟ್‌ಗಳ ಬಳಕೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿರುವ ಇಂದಿನ ಸಂದರ್ಭದಲ್ಲಿ, ಅವರನ್ನು ಹೊರಾಂಗಣ ಚಟುವಟಿಕೆಗಳತ್ತ ಆಕರ್ಷಿಸುವ ಉದ್ದೇಶದಿಂದ ಮ್ಯಾರಾಥಾನ್ ಆಯೋಜಿಸಲಾಗಿದೆ ಎಂದರು.
ಮಕ್ಕಳಿಗೆ ಓದಿನ ಜೊತೆಗೆ ದೈಹಿಕ ಚಟುವಟಿಕೆಗಳೂ ಅಗತ್ಯ. ಇಂತಹ ಕಾರ್ಯಕ್ರಮಗಳು ಅವರಲ್ಲಿ ಆರೋಗ್ಯದ ಕಾಳಜಿ, ಆತ್ಮವಿಶ್ವಾಸ ಮತ್ತು ಶಿಸ್ತನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಜಾಲಿ ಕಡಲತೀರದ ನೈಸರ್ಗಿಕ ಸೌಂದರ್ಯ ಮತ್ತು ತಂಪಾದ ವಾತಾವರಣದಲ್ಲಿ ಓಡಿದ ಮಕ್ಕಳು ಹೊಸ ಅನುಭವ ಪಡೆದರು. ತರಗತಿಯ ಪಾಠಗಳಾಚೆಗೂ ಕಲಿಕೆಗೆ ಅವಕಾಶವಿದೆ ಎಂಬುದನ್ನು ಇಂತಹ ಚಟುವಟಿಕೆಗಳು ಪರಿಚಯಿ ಸುತ್ತವೆ. ಮಕ್ಕಳ ದಿನಾಚರಣೆಯನ್ನು ಸಂತಸದಿಂದ ಆಚರಿಸಲು ಮ್ಯಾರಾಥಾನ್ ಉತ್ತಮ ವೇದಿಕೆಯಾಯಿತು ಎಂದು ಅವರು ಹೇಳಿದರು.
ಶಿಕ್ಷಕರಾದ ಮುಹಮ್ಮದ್ ರಝಾ ಮಾನ್ವಿ, ಅಬ್ದುಲ್ಲಾ ರಬಿ ಖಲಿಫಾ, ಆಮೀನಾ ಫಿರ್ದೋಸ್, ನಾಝಿಮಾ ಮತ್ತಿತರರು ಉಪಸ್ಥಿತರಿದ್ದರು.






