ಭಟ್ಕಳ: ಸರಾಬಿ ನದಿ ಕಲುಷಿತ: ಪಂಪಿಂಗ್ ಸ್ಟೇಷನ್ ಅವ್ಯವಸ್ಥೆಗೆ ಜಿಲ್ಲಾಧಿಕಾರಿ ಆಕ್ರೋಶ
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತರಾಟೆ

ಭಟ್ಕಳ: ಪಟ್ಟಣದ ಸರಾಬಿ ನದಿಗೆ ನಿರಂತರವಾಗಿ ಕೊಳಚೆ ನೀರು ಹರಿಯುತ್ತಿರುವುದರಿಂದ ನದಿ ಸಂಪೂರ್ಣ ಕಲುಷಿತಗೊಂಡು ಚರಂಡಿಯಂತಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಹರ್ಷಲ್ ನಾರಾಯಣ ರಾವ್ ಬೋಯರ್ ಅವರು ಶನಿವಾರ ಸಂಜೆ ಗಾಂಧಿ ರಸ್ತೆಯ ಗೌಸಿಯಾ ಸ್ಟ್ರೀಟ್‌ನ ಪಂಪಿಂಗ್ ಸ್ಟೇಷನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭಟ್ಕಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ, ಬೆಳಕೆಯಲ್ಲಿ ನಡೆದ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸಂಜೆ ಸುಮಾರು 6 ಗಂಟೆಗೆ ಪಂಪಿಂಗ್ ಸ್ಟೇಷನ್‌ಗೆ ತೆರಳಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕಾರವಾರದಿಂದ ಆಗಮಿಸಿದ್ದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಭಟ್ಕಳ ಪುರಸಭೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಪಂಪಿಂಗ್ ಸ್ಟೇಷನ್‌ನಿಂದ ನಿರಂತರವಾಗಿ ಕೊಳಚೆ ನೀರು ಹೊರಹೋಗುತ್ತಿರುವುದಕ್ಕೆ ಕಾರವಾರದ ವಾಟರ್ ಬೋರ್ಡ್ ಕಾರಣ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಾಟರ್ ಬೋರ್ಡ್‌ನ ಕಾರ್ಯನಿರ್ವಾಹಕ ಎಂಜಿನಿಯರ್ ಶಿವರಾಮ ನಾಯ್ಕ, ವೆಟ್‌ವೆಲ್‌ನಲ್ಲಿ ಸೋರಿಕೆ ಉಂಟಾಗಿರುವುದರಿಂದ ಕೊಳಚೆ ನೀರು ಸರಾಬಿ ನದಿಗೆ ಸೇರುತ್ತಿದೆ. ಇದರ ದುರಸ್ತಿ ಕಾರ್ಯವನ್ನು ಭಟ್ಕಳ ಪುರಸಭೆಯೇ ಕೈಗೊಳ್ಳಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪುರಸಭೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸೇರಿದಂತೆ ಸಂಬಂಧ ಪಟ್ಟ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಪಂಪಿಂಗ್ ಸ್ಟೇಷನ್ ನಿರ್ವಹಣೆಯಲ್ಲಿ ತೋರಿದ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಮೂರು ತಿಂಗಳಿಂದ ಪಂಪಿಂಗ್ ಸ್ಟೇಷನ್‌ನ ಜನರೇಟರ್ ಸ್ಥಗಿತಗೊಂಡಿದ್ದು, ಪಂಪಿಂಗ್ ಯಂತ್ರಗಳಲ್ಲಿಯೂ ಆಗಾಗ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದೆ ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಮೂಲಸೌಕರ್ಯಗಳ ನಿರ್ವಹಣೆಯನ್ನೂ ಸರಿಯಾಗಿ ಮಾಡದಿದ್ದರೆ ಅಧಿಕಾರಿಗಳು ಯಾವ ಕೆಲಸಕ್ಕಾಗಿ ವೇತನ ಪಡೆಯುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಕಾರವಾರದಿಂದ ಆಗಮಿಸಿದ್ದ ಪುರಸಭೆ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್ ಅವರಿಗೂ ಅಗತ್ಯ ಕ್ರಮ ಕೈಗೊಂಡು ತಾಂತ್ರಿಕ ದೋಷಗಳನ್ನು ಸರಿಪಡಿಸಿ ಪಂಪಿಂಗ್ ವ್ಯವಸ್ಥೆಯನ್ನು ಸುಗಮಗೊಳಿಸುವಂತೆ ಸೂಚಿಸಿದರು. ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಂದ ಸಾರ್ವಜನಿಕರ ಎದುರಿನಲ್ಲಿ ಅಲ್ಲ, ಕಚೇರಿಗೆ ತೆರಳಿ ಉತ್ತರ ಪಡೆಯಲಾಗುವುದು ಎಂದರು.
ಈ ದೀರ್ಘಕಾಲದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳೀಯರಿಗೆ ಭರವಸೆ ನೀಡಿದ ಜಿಲ್ಲಾಧಿಕಾರಿ, ಸಾರ್ವಜನಿಕರು ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡಿದರು.






